ಸಿರುಗುಪ್ಪ: ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಹೆಚ್ಚಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಅಂಭಯಾಂಜನೇಯ್ಯ ಸ್ವಾಮಿ ದೇವಸ್ಥಾನದಿಂದ ಗಾಂಧಿಜೀ ವೃತ್ತದ ವರೆಗೆ ಸಿರುಗುಪ್ಪ, ತೆಕ್ಕಲಕೋಟೆ ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಗೌಸಿಯಾ ಬೇಗಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಾಜಿ ನಗರಸಭೆ ಅಧ್ಯಕ್ಷ ಡಿ.ನಾಗರಾಜ ಮಾತನಾಡಿ, ರೈತರು ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ಸಂಕಷ್ಟದಲ್ಲಿದ್ದಾರೆ. ಬೆಳೆಗಾಗಿ ಮಾಡಿದ ಸಾಲ ಮುಟ್ಟಿಸಲು ಆಗದೆ ರೈತರು ಆತ್ಮಹತ್ಯಗೆ ಶರಣಾಗುತ್ತಿದ್ದಾರೆ. ಇದೀಗ ರಸಗೊಬ್ಬರ ಬೆಲೆ ಏರಿಕೆ ಮಾಡಿ ಮಾಡಿ ರೈತರನ್ನು ದಿವಾಳಿಯನ್ನಾಗಿ ಮಾಡಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೋವಿಂದ ಮಾತನಾಡಿ, ಕೇಂದ್ರ ಸರ್ಕಾರ ಈ ಕೂಡಲೇ ರಸಗೊಬ್ಬರ ಬೆಲೆ ಇಳಿಕೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆಂದು ಎಚ್ಚರಿಸಿದರು.
ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಸಿರುಗುಪ್ಪ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಮನಸ್ವಿತ್ ನಾಯಕ್, ತೆಕ್ಕಲಕೋಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ತಿಮ್ಮಪ್ಪ, ಸಿರುಗುಪ್ಪ ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಇಸ್ಮಾಯಿಲ್ ಮುಖಂಡರಾದ ಪವನ್ ಕುಮಾರ್ ದೇಸಾಯಿ, ವೆಂಕಟೇಶ್, ಕಾಯಿಪಲ್ಲೆ ನಾಗರಾಜ್, ಮೋದಿನ್, ಶ್ರೀನಿವಾಸ್, ಬಿ.ಎಂ.ಅನಿಲ್ ನಾಯಕ, ನಾಗಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.