ಬಳ್ಳಾರಿ: ಕುಡಿಯುವ ನೀರಿನ ಕಾಮಗಾರಿ ಗುತ್ತಿಗೆ ಪಡೆಯಲು ಗುತ್ತಿಗೆದಾರರೊಬ್ಬರಿಗೆ ನಕಲಿ ದಾಖಲೆ ಮಾಡಿಕೊಟ್ಟಿದ್ದಪ್ರಕರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಾಲ್ವರು ಅಧಿಕಾರಿಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಯಶವಂತನಗರದಲ್ಲಿ ಪೈಪ್‌ಲೈನ್, ಮನೆಗಳಿಗೆ ನಳ ಸಂಪರ್ಕ ಮತ್ತು ಟಿಎಚ್‌ಟಿ ಒದಗಿಸುವ ಒಟ್ಟು ₹18.64 ಲಕ್ಷ ಮೊತ್ತದ ಕಾಮಗಾರಿಗೆ 2020-21ನೇ ಸಾಲಿನಲ್ಲಿ ಕರೆದಿದ್ದ ಟೆಂಡರ್‌ನಲ್ಲಿ ಗುತ್ತಿಗೆದಾರ ಮೌಲಾಲಿ ಅವರು ಭಾಗವಹಿಸಿದ್ದರು.
ಅಂದಿನ ಕಾರ್ಯಪಾಲಕ ಎಂಜಿನಿಯರ್ ಆರ್.ಪ್ರಭು, ಲೆಕ್ಕಾಧೀಕ್ಷಕ ಎಂ.ಮಾಲತೇಶ್, ಅಂದಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಸ್.ಶ್ರೀಕಂಠ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸುರೇಂದ್ರನಾಥ ಅವರು ನಕಲಿ ‘ವರ್ಕ್ ಡನ್’ ಪ್ರಮಾಣಪತ್ರ ಮತ್ತು ನಕಲಿ ರಹಸ್ಯ ವರದಿಗಳನ್ನು ಮೌಲಾಲಿಗೆ ಒದಗಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮವಾಗಿ ಗುತ್ತಿಗೆ ಪಡೆದ ಮೌಲಾಲಿ ಅವರನ್ನು ಮೊದಲ ಆರೋಪಿಯಾಗಿಸಲಾಗಿದೆ. ಇವರ ವಿರುದ್ಧ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಚ್. ಇಂಧೂದರ ಅವರು ಕೌಲ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.