
ಬಳ್ಳಾರಿ: ತಮಿಳುನಾಡಿನ ತೂತುಕುಡಿಯಿಂದ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಅಸ್ಪರಿಗೆ ವಿಂಡ್ ಮಿಲ್ (ಪವನ ವಿದ್ಯುತ್ ಯಂತ್ರ) ರೆಕ್ಕೆಗಳನ್ನು ಸಾಗಿಸಲು ಟ್ರಾನ್ಸ್‌ಪೋರ್ಟ್ ಕಂಪನಿಯೊಂದು ಬಳ್ಳಾರಿ ನಗರದಲ್ಲಿ ಮರಗಳನ್ನು ಪೂರ್ಣ ಪ್ರಮಾಣದಲ್ಲಿ ಕಡಿದುಹಾಕಿದೆ. ಈ ಸಂಬಂಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿದೆ.
ಬಳ್ಳಾರಿ ನಗರದ ಸಂಗಂ ವೃತ್ತದಲ್ಲಿದ್ದ ಅರಳಿ, ಬೇವು ಸೇರಿ ಮೂರು ಮರಗಳನ್ನು ಫೆ.14ರಂದು ರಾತ್ರಿ ಕತ್ತರಿಸಲಾಗಿದೆ. ಗುಜರಾತ್‌ನ ಅಹಮದಾಬಾದ್ ನಿವಾಸಿ ಬೀರೇಂದ್ರ (58) ಕೃತ್ಯವೆಸಗಿದ ಆರೋಪಿ. ಕರ್ನಾಟಕ ಅರಣ್ಯ ಕಾಯ್ದೆ–1963ರ ಕಲಂ (33) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕರ್ನೂಲ್ ಜಿಲ್ಲೆಯ ಅದವಾನಿ ತಾಲ್ಲೂಕಿನ ಅಸ್ಪರಿಯಲ್ಲಿ ಪವನ ವಿದ್ಯುತ್ ಯಂತ್ರಗಳನ್ನು ಜೆಎಸ್‌ಡಬ್ಲ್ಯು ಕಂಪನಿ ಅನುಸ್ಥಾಪಿಸುತ್ತಿದೆ. ಇದಕ್ಕಾಗಿ ತಮಿಳುನಾಡಿನ ತೂತುಕುಡಿಯಿಂದ ಯಂತ್ರದ ರೆಕ್ಕೆಗಳನ್ನು ತರಿಸಿಕೊಳ್ಳುತ್ತಿದೆ ಎನ್ನಲಾಗಿದೆ. ‘ನಬ್ರೋಸ್’ ಎಂಬ ಟ್ರಾನ್ಸ್‌ಪೋರ್ಟ್ ಕಂಪನಿಯು ರೆಕ್ಕೆಗಳನ್ನು ಸಾಗಿಸುವ ಗುತ್ತಿಗೆ ಪಡೆದಿದ್ದು, ಸೇಲಂ - ದಾಬಪೇಟೆ - ಚಿತ್ರದುರ್ಗ - ಚಳ್ಳಕೆರೆ - ಬಳ್ಳಾರಿ - ಸಂಗಮ ವೃತ್ತದ ಮೂಲಕ ಆಲೂರು - ಆದೋನಿ ಮಾರ್ಗವಾಗಿ ಅಸ್ಪರಿಗೆ ರೆಕ್ಕೆಗಳನ್ನು ಕೊಂಡೊಯ್ಯುತ್ತದೆ.
ಯಂತ್ರಗಳ ರೆಕ್ಕೆಯ ಉದ್ದ 82 ಮೀಟರ್ ಇದ್ದು, ಬಳ್ಳಾರಿಯ ಸಂಗಂ ವೃತ್ತದಲ್ಲಿ ತಿರುವು ಪಡೆಯುವಾಗ, ಕೆಲವು ಮರಗಳು ಅಡ್ಡಬರುತ್ತಿದ್ದವು ಎನ್ನಲಾಗಿದೆ. ಇವುಗಳ ರೆಂಬೆ ಕೊಂಬೆಗಳನ್ನು ಕತ್ತರಿಸಲು ಟ್ರಾನ್ಸ್‌ಪೋರ್ಟ್ ಕಂಪನಿಯು ಜ. 6ರಂದು ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಮನವಿ ಪರಿಶೀಲಿಸಿದ್ದ ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮರದ ರೆಂಬೆ ಕೊಂಬೆಗಳನ್ನು ಮಾತ್ರವೇ ಕಡಿಯಲು ಅನುಮತಿ ನೀಡಿದ್ದರು. ಜತೆಗೆ, ಕಟಾವು ಮಾಡಿದ ಮರಕ್ಕೆ ಪರ್ಯಾಯವಾಗಿ ಮೂರು ಗಿಡಗಳನ್ನು ನೆಡಬೇಕು, ಕಟಾವು ಮಾಡಿದ ಮರಮುಟ್ಟುಗಳನ್ನು ಸಾಗಿಸಲು ಕಡ್ಡಾಯವಾಗಿ ರಹದಾರಿ ಪಡೆಯಬೇಕು ಎಂದು ಷರತ್ತುಗಳನ್ನು ವಿಧಿಸಿದ್ದರು.
ಆದರೆ, ಅರಣ್ಯ ಇಲಾಖೆಯ ಷರತ್ತುಗಳನ್ನು ಉಲ್ಲಂಘಿಸಿದ ಕಂಪನಿಯು ಬೃಹತ್ ಮರವನ್ನು ಬಹುತೇಕ ಕಡಿದು ಹಾಕಿದೆ.
ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ಕರ್ನಾಟಕ ಮರಗಳ ಸಂರಕ್ಷಣೆ ಅಧಿನಿಯಮದ ಸೆಕ್ಷನ್ 22(1) ಪ್ರಕಾರ, ಮರ ಕಡಿಯುವ ಕಂಪನಿ ಮತ್ತು ಕಂಪನಿಯ ಮುಖ್ಯಸ್ಥನನ್ನು ಆರೋಪಿಯಾಗಿ ಮಾಡಬೇಕು. ಆದರೆ, ಈ ಪ್ರಕರಣದಲ್ಲಿ ಮರದ ಕೊಂಬೆ ಕಡಿಯಲು ಅರ್ಜಿ ಹಾಕಿದ್ದ ವ್ಯಕ್ತಿಯನ್ನು ಆರೋಪಿಯಾಗಿ ಮಾಡಲಾಗಿದೆ. ಆರೋಪಿಯು ಕಂಪನಿಯಲ್ಲಿ ಯಾವ ಹುದ್ದೆ ಹೊಂದಿದ್ದಾನೆ ಎಂಬುದನ್ನೂ ಉಲ್ಲೇಖಿಸಿಲ್ಲ.
ಮರದ ಕೊಂಬೆ ಕಡಿಯಲು ಅರ್ಜಿ ಹಾಕಿದ್ದ ವ್ಯಕ್ತಿಯನ್ನು ಎ–1 ಆರೋಪಿಯಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಕಂಪನಿಯ ಮಾಲೀಕರ ಹೆಸರನ್ನೂ ಸೇರಿಸಲು ನಾನು ಸೂಚನೆ ನೀಡಿದ್ದೇನೆಬಸವರಾಜ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.