ADVERTISEMENT

ಹೊಸಪೇಟೆ: ಸಚಿವರಿಂದ ‘ಆಹಾರಾನಂದ’ ಕಿಟ್‌ ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 7:04 IST
Last Updated 17 ಏಪ್ರಿಲ್ 2020, 7:04 IST
ಬಡವರಿಗೆ ‘ಆಹಾರಾನಂದ’ ಕಿಟ್‌ಗಳನ್ನು ವಿತರಿಸಲಾಯಿತು
ಬಡವರಿಗೆ ‘ಆಹಾರಾನಂದ’ ಕಿಟ್‌ಗಳನ್ನು ವಿತರಿಸಲಾಯಿತು   
""

ಹೊಸಪೇಟೆ: ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಕಡು ಬಡವರಿಗೆ ‘ಆಹಾರಾನಂದ’ ಕಿಟ್‌ ವಿತರಿಸುವ ಕಾರ್ಯಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಿದರು.

ಕಿಟ್‌ಗಳಿಂದ ತುಂಬಿದ ಲಾರಿಗಳಿಗೆ ಅವರ ಬಂಗ್ಲೆ ಎದುರು ಕುಟುಂಬ ಸದಸ್ಯರೊಂದಿಗೆ ಸೇರಿ ಪೂಜೆ ನೆರವೇರಿಸಿದ ಅವರು, ಸಾಂಕೇತಿಕವಾಗಿ ಕಿಟ್‌ ವಿತರಿಸಿದರು.

ಬಳಿಕ ಲಾರಿಗಳು ನಗರದ ವಿವಿಧ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಿದವು. ಈ ಮುಂಚೆಯೇ ಜನರಿಗೆ ಟೋಕನ್‌ಗಳನ್ನು ಕೊಡಲಾಗಿತ್ತು. ಟೋಕನ್‌ಗಳನ್ನು ಪಡೆದು ಕಿಟ್‌ ವಿತರಿಸಲಾಯಿತು. ಅದರ ಮೇಲೆ ಆನಂದ್‌ ಸಿಂಗ್‌ ಹಾಗೂ ಬಿಜೆಪಿ ಮುಖಂಡರ ಭಾವಚಿತ್ರಗಳಿವೆ. ದೊಡ್ಡ ಅಕ್ಷರಗಳಲ್ಲಿ ‘ಆಹಾರಾನಂದ’ ಎಂಬ ಬರಹವಿದೆ.

‘ವಿಜಯನಗರ ಕ್ಷೇತ್ರದಲ್ಲಿ ಒಟ್ಟು 5,070 ಅಂತ್ಯೋದಯ, 51,303 ಬಡತನ ರೇಖೆಗಿಂತ ಕೆಳಗಿರುವವರು ಇದ್ದಾರೆ. ತಲಾ ಒಂದು ಪಡಿತರದಾರರಿಗೆ 6 ಕೆ.ಜಿ. ಜೋಳ, 3 ಕೆ.ಜಿ. ತೊಗರಿ ಬೇಳೆ, 2 ಕೆ.ಜಿ. ಎಣ್ಣೆ, 400 ಗ್ರಾಂ ಖಾರದ ಪುಡಿ, 150 ಗ್ರಾಂ ಹಾಲಿನ ಪುಡಿ, ತಲಾ 100 ಗ್ರಾಂ ಅರಿಶಿಣ, ಜೀರಿಗೆ, ಬೆಳ್ಳುಳ್ಳಿ, ಉಪ್ಪಿನ ಪ್ಯಾಕೆಟ್‌ ಸೇರಿದಂತೆ ಒಬ್ಬರಿಗೆ ₹1,015 ಮೌಲ್ಯದ ಕಿಟ್‌ ನನ್ನ ಸ್ವಂತ ಹಣದಿಂದ ವಿತರಿಸುತ್ತಿದ್ದೇನೆ’ ಎಂದು ಆನಂದ್‌ ಸಿಂಗ್‌ ಹೇಳಿದ್ದಾರೆ.

ಕೊರೊನಾ ಸೋಂಕು ಹರಡದಂತೆ ಮಾ. 24ರಂದು ಲಾಕ್‌ಡೌನ್‌ ಘೋಷಿಸಲಾಗಿತ್ತು. ಅದಾದ ಕೆಲ ದಿನಗಳ ನಂತರ ವಿವಿಧ ಸಂಘ ಸಂಸ್ಥೆಗಳು, ಗಣಿ ಮಾಲೀಕರು ಆಹಾರದ ಕಿಟ್‌ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆದರೆ, ಕ್ಷೇತ್ರದವರೇ ಆದ ಸಚಿವರು ಬಡವರಿಗೆ ನೆರವಿನ ಹಸ್ತ ಚಾಚುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಕಿಟ್‌ಗಳನ್ನು ತುಂಬಿದ್ದ ವಾಹನಕ್ಕೆ ಅರಣ್ಯ ಸಚಿವ ಆನಂದ್‌ ಸಿಂಗ್‌ ಪೂಜೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.