ತೋರಣಗಲ್ಲು: ಸಮೀಪದ ತಿಮ್ಮಾಲಾಪುರ ಗ್ರಾಮದಲ್ಲಿ ನೂತನ ಮಹಿಳೆಯರ ಸಾಮೂಹಿಕ ಶೌಚಾಲಯವನ್ನು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಶೀಘ್ರ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮಹಿಳೆ ಶಿವಮ್ಮ ಮಾತನಾಡಿ, ‘ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಮಹಿಳೆಯರ ಸಾಮೂಹಿಕ ಶೌಚಾಲಯ ಇಲ್ಲದಿರುವುದರಿಂದ ಗ್ರಾಮದ ಎಲ್ಲ ಮಹಿಳೆಯರು ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ. ಗ್ರಾಮದಲ್ಲಿನ ಶಿಥೀಲಗೊಂಡ ಹಳೆಯ ಶೌಚಾಲಯವನ್ನು ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿ ಒಂದು ವರ್ಷ ಕಳೆದಿದೆ. ಆದರೆ ಇಲ್ಲಿಯವರೆಗೂ ನೂತನ ಶೌಚಾಲಯವನ್ನು ನಿರ್ಮಿಸಲು ಮುಂದಾಗುತ್ತಿಲ್ಲ. ಶೀಘ್ರ ನಿರ್ಮಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ವಿಳಂಭ ಧೋರಣೆ ಅನುಸರಿಸುತ್ತಿರುವುದು ಎಷ್ಟು? ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮಹಿಳೆಯರ ಅನುಕೂಲಕ್ಕಾಗಿ ತಿಮ್ಮಾಲಾಪುರ ಗ್ರಾಮದಲ್ಲಿ ಸರ್ಕಾರದ ಅನುದಾನದಲ್ಲಿ ಮಾದರಿ ಶೌಚಾಲಯವನ್ನು ತ್ವರಿತವಾಗಿ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಏಳುಬೆಂಚಿ ಗ್ರಾಮ ಪಂಚಾಯಿತಿ ಗ್ರಾಮಾಭಿವೃದ್ದಿ ಅಧಿಕಾರಿ ರಮಾಲಿ ಪ್ರತಿಕ್ರಿಯಿಸಿದರು.
ಮಹಿಳೆಯರಾದ ಶಂಕ್ರಮ್ಮ, ರುದ್ರಮ್ಮ, ತಿಮ್ಮಕ್ಕ, ಯಲ್ಲಮ್ಮ, ತಿಮ್ಮಕ್ಕ, ಮರಿಯಮ್ಮ, ಲಕ್ಷ್ಮಿ, ಗಾಧಿಲಿಂಗಮ್ಮ, ಗೋವಿಂದಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.