ADVERTISEMENT

ಉದ್ಘಾಟನೆಗೆ ಸಿದ್ಧಗೊಂಡಿವೆ ಬಳ್ಳಾರಿಯ ನಾಲ್ಕು ಹಾಸ್ಟೆಲ್‌

ಬಾಡಿಗೆ ಕಟ್ಟಡಗಳಿಂದ ಶೀಘ್ರ ಮುಕ್ತಿ; ಸ್ವಂತ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಗೊಳ್ಳಲಿವೆ ವಸತಿ ನಿಲಯಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಜೂನ್ 2019, 19:30 IST
Last Updated 19 ಜೂನ್ 2019, 19:30 IST
ಹೊಸಪೇಟೆಯ ಜಂಬುನಾಥಹಳ್ಳಿ ಬಳಿ ನಿರ್ಮಾಣಗೊಂಡಿರುವ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಕಟ್ಟಡ–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಜಂಬುನಾಥಹಳ್ಳಿ ಬಳಿ ನಿರ್ಮಾಣಗೊಂಡಿರುವ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಕಟ್ಟಡ–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿದ ತಲಾ ಎರಡು ಹಾಸ್ಟೆಲ್‌ ಕಟ್ಟಡಗಳ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಈ ತಿಂಗಳಾಂತ್ಯಕ್ಕೆ ಉದ್ಘಾಟನೆಗೊಳ್ಳಲಿವೆ.

ಮೆಟ್ರಿಕ್‌ ನಂತರದ ಪರಿಶಿಷ್ಟ ಪಂಗಡ ಬಾಲಕಿಯರ ವಸತಿ ನಿಲಯದ ಕಟ್ಟಡ ಆಶ್ರಯ ಕಾಲೊನಿಯಲ್ಲಿ ನಿರ್ಮಿಸಿದರೆ, ಬಾಲಕರ ವಸತಿ ನಿಲಯ,ಮೆಟ್ರಿಕ್‌ ನಂತರದ ಪರಿಶಿಷ್ಟ ಜಾತಿ ಬಾಲಕರ ತಾಂತ್ರಿಕ ವಸತಿ ನಿಲಯ, ನಂ–2 ವಸತಿ ನಿಲಯಗಳ ಕಟ್ಟಡ ಜಂಬುನಾಥಹಳ್ಳಿ ರಸ್ತೆಯ ಆದರ್ಶ ಶಾಲೆಯ ಸಮೀಪ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಮೆಟ್ರಿಕ್‌ ನಂತರದ ಪರಿಶಿಷ್ಟ ಪಂಗಡ ಬಾಲಕರ ಹಾಸ್ಟೆಲ್‌ ಹಾಗೂ ಪರಿಶಿಷ್ಟ ಜಾತಿಯ ನಂ–2 ವಸತಿ ನಿಲಯ ಅನೇಕ ವರ್ಷಗಳಿಂದ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದವು. ಇನ್ನು ಪರಿಶಿಷ್ಟ ಪಂಗಡ ಬಾಲಕಿಯರ ವಸತಿ ನಿಲಯ ಪರಿಶಿಷ್ಟ ಜಾತಿಯ ಹಾಸ್ಟೆಲ್‌ನಲ್ಲಿ ನಡೆಸುತ್ತಿದ್ದರೆ, ಪರಿಶಿಷ್ಟ ಜಾತಿಯ ತಾಂತ್ರಿಕ ಹಾಸ್ಟೆಲ್‌ ನಗರದ ಎಂ.ಪಿ. ಪ್ರಕಾಶ ನಗರದಲ್ಲಿನ ಎಸ್ಟಿ ಹಾಸ್ಟೆಲ್‌ನಲ್ಲಿ ನಡೆಸಲಾಗುತ್ತಿತ್ತು.

ADVERTISEMENT

ಹೀಗೆ ಒಟ್ಟೊಟ್ಟಿಗೆ ಎರಡೆರಡು ಹಾಸ್ಟೆಲ್‌ಗಳನ್ನು ನಡೆಸುತ್ತಿದ್ದರಿಂದ ತಾಂತ್ರಿಕ ತೊಂದರೆ, ಸ್ಥಳಾವಕಾಶಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ಇನ್ನು ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್‌ ಇದ್ದದ್ದರಿಂದ ಇಲಾಖೆಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿತ್ತು. ಈ ಕುರಿತು ಸಾಕಷ್ಟು ದೂರುಗಳು ಬಂದ ಕಾರಣಕ್ಕಾಗಿ ಇಲಾಖೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಂಡಿದೆ.

ಎಲ್ಲ ನಾಲ್ಕೂ ಕಟ್ಟಡಗಳಲ್ಲಿ ತಲಾ ನೂರು ವಿದ್ಯಾರ್ಥಿಗಳು ಇರುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಡುಗೆ ಕೋಣೆ, ಊಟ ಮಾಡುವ ಹಾಲ್‌, ಸ್ನಾನಗೃಹ, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ’ಪ್ರತಿ ಕಟ್ಟಡ ನಿರ್ಮಾಣಕ್ಕೆ ತಲಾ ₹1 ಕೋಟಿ ಖರ್ಚು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಎಲ್ಲ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ‘ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತಕುಮಾರ ’ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

’ಅನೇಕ ವರ್ಷಗಳಿಂದ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದವು. ಈಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಸಂತಸದಿಂದ ಎದುರು ನೋಡುತ್ತಿದ್ದಾರೆ. ಎಲ್ಲ ನಾಲ್ಕೂ ಕಟ್ಟಡಗಳನ್ನು ಈ ತಿಂಗಳಾಂತ್ಯದೊಳಗೆ ಜನಪ್ರತಿನಿಧಿಗಳಿಂದ ಉದ್ಘಾಟಿಸಿದ ನಂತರ ಅಲ್ಲಿಗೆ ಸ್ಥಳಾಂತರಿಸಲಾಗುವುದು‘ ಎಂದು ಹೇಳಿದರು.

’ನಗರದಲ್ಲಿಯೇ ₹1 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನರಾಂ ಭವನ ಕೂಡ ನಿರ್ಮಿಸಲಾಗಿದೆ. ಅದು ಕೂಡ ವಸತಿ ನಿಲಯಗಳ ಕಟ್ಟಡದೊಂದಿಗೆ ಉದ್ಘಾಟಿಸುವ ಯೋಜನೆ ಇದೆ. ಅದು ಇನ್ನಷ್ಟೇ ಅಂತಿಮವಾಗಬೇಕಿದೆ. ಜತೆಗೆ ನಂ–3 ಎಸ್ಸಿ ವಸತಿ ನಿಲಯದ ಕಟ್ಟಡ ನಿರ್ಮಾಣ ಕೆಲಸ ಅಂತಿಮ ಹಂತದಲ್ಲಿದೆ. ಕೆಲಸ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಆಗಬಹುದು‘ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.