ADVERTISEMENT

ಗಾಂಧಿ ವಾರಸುದಾರರಿಂದಲೇ ಗಾಂಧಿಗೆ ಮಸಿ: ಆರ್‌ಎಸ್ಎಸ್‌ ಪ್ರಚಾರಕ ಅರುಣ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 15:16 IST
Last Updated 14 ಅಕ್ಟೋಬರ್ 2018, 15:16 IST
ಹೊಸಪೇಟೆಯಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಂದ ಆಕರ್ಷಕ ಪಥ ಸಂಚಲನ ನಡೆಯಿತು
ಹೊಸಪೇಟೆಯಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಂದ ಆಕರ್ಷಕ ಪಥ ಸಂಚಲನ ನಡೆಯಿತು   

ಹೊಸಪೇಟೆ: ‘ಸ್ವಾರ್ಥ ಸಾಧನೆಗೆ ತಮ್ಮ ಹೆಸರು ಹೇಳಿಕೊಂಡು ಅಪಚಾರ ಮಾಡುತ್ತಿರುವುದನ್ನು ನೋಡಿದ್ದರೆ ಸ್ವತಃ ಮಹಾತ್ಮ ಗಾಂಧೀಜಿ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌.ಎಸ್.ಎಸ್‌.) ಹಿರಿಯ ಪ್ರಚಾರಕ ಅರುಣ್‌ ಕುಮಾರ್‌ ಹೇಳಿದರು.

ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಉದ್ದೇಶಿಸಿ ಮಾತನಾಡಿದ ಅವರು, ‘ಸಂಘವನ್ನು ಸಂಪೂರ್ಣವಾಗಿ ಹೊಸಕಿ ಹಾಕಬೇಕೆಂಬ ಒಂದೇ ಉದ್ದೇಶದಿಂದ ಗಾಂಧಿ ಹತ್ಯೆಯ ಆರೋಪವನ್ನು ಸಂಘದ ಮೇಲೆ ಹೊರಿಸಲಾಯಿತು. ಸಂಘದ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಲಾಯಿತು. ನ್ಯಾಯಾಲಯ ಛೀಮಾರಿ ಹಾಕಿದ ನಂತರ ಸಂಘದ ವಿರುದ್ಧ ಅಪಪ್ರಚಾರ ನಡೆಸುವುದು ನಿಂತಿದೆ. ಆದರೆ, ಗಾಂಧಿಯವರ ವಾರಸುದಾರರಂತೆ ವರ್ತಿಸುತ್ತಿರುವವರು ಅವರಿಗೆ ಮಸಿ ಬಳಿಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಗಾಂಧೀಜಿ ಅವರು ವಿದೇಶಿ ಆಡಳಿತ ಕಿತ್ತು ಹಾಕಬೇಕೆಂದು ಹೇಳಿದ್ದರು. ಈಗ ಮತ್ತೆ ಅದನ್ನು ತರುವ ಹುನ್ನಾರ ನಡೆಸಲಾಗುತ್ತಿದೆ. ಸತ್ಯ ಗಾಂಧೀಜಿಯವರ ಬಹುದೊಡ್ಡ ಮೌಲ್ಯವಾಗಿತ್ತು. ಅಸ್ಪೃಶ್ಯತೆ ಹೊಡೆದೊಡಿಸಬೇಕೆಂದು ಹೇಳಿದ್ದರು. ಖಾದಿ ಬಟ್ಟೆ, ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಹೇಳಿದ್ದರು. ಆ ಎಲ್ಲ ಕೆಲಸವನ್ನು ಶುದ್ಧ ಅಂತಃಕರಣದಿಂದ ಸಂಘ ಮಾಡುತ್ತಿದೆ’ ಎಂದು ವಿವರಿಸಿದರು.

ADVERTISEMENT

‘25–30 ವರ್ಷಗಳಿಂದ ಸಂಘಕ್ಕೆ ಸೀಮಿತವಾಗಿದ್ದ ಕಬಡ್ಡಿ, ಯೋಗ, ಸೂರ್ಯ ನಮಸ್ಕಾರ, ಧ್ಯಾನ ಇಂದು ಜಗತ್‌ ಪ್ರಸಿದ್ಧವಾಗಿವೆ. ಅವುಗಳು ಕೇವಲ ಒಂದು ವರ್ಗಕ್ಕೆ ಸೀಮಿತ ಎಂದು ಹೇಳುತ್ತಿದ್ದರು. ಆದರೆ, ಇಂದು ಇಡೀ ಜಗತ್ತು ಮಾನ್ಯ ಮಾಡಿದೆ. ಇರಾನಿನ ಮಸೀದಿಯಲ್ಲಿ ಓಂಕಾರ ಮೊಳಗುತ್ತಿದೆ. ಸಂಘದಲ್ಲಿ ತರಬೇತಿ ಪಡೆದವರು ವಿಜ್ಞಾನಿ, ಸಾಹಿತಿಗಳಾಗಿದ್ದಾರೆ. ಇಬ್ಬರೂ ಶ್ರೇಷ್ಠ ಪ್ರಧಾನಿಗಳನ್ನು ದೇಶಕ್ಕೆ ಕೊಟ್ಟಿರುವ ಹೆಗ್ಗಳಿಕೆ ಇದೆ’ ಎಂದು ಹೇಳಿದರು.

‘ಕ್ರೀಡೆ, ವಿಜ್ಞಾನ–ತಂತ್ರಜ್ಞಾನ, ಸಾಹಿತ್ಯ, ಕೃಷಿಯಲ್ಲಿ ಭಾರತ ಮುಂದೆ ಬರುತ್ತಿದೆ. ಮೆಕಾಲೆ ಶಿಕ್ಷಣ ಪದ್ಧತಿಯ ಪರಿಣಾಮವಾಗಿ ನಮ್ಮ ಮನಸ್ಸುಗಳು ಹಾಳಾಗಿದ್ದವು. ಸಂಘದ ಕೆಲಸದಿಂದ ಅದು ಬದಲಾಗಿದೆ. ನಮ್ಮ ಮನಸ್ಸುಗಳು ಈಗ ಬದಲಾಗಿವೆ. ಭಾರತೀಯ ಜೀವನ ಪದ್ಧತಿ, ಮೌಲ್ಯಗಳು ಇಡೀ ಜಗತ್ತನ್ನು ಆಕರ್ಷಿಸುತ್ತಿವೆ. ಅದಕ್ಕೆ ಸಂಘದ ಕೆಲಸವೇ ಪ್ರಮುಖ ಕಾರಣ’ ಎಂದರು.

‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ಮಾತಿನಂತೆ ಸಂಘದ ಕಾರ್ಯಕರ್ತರು ನಡೆದುಕೊಳ್ಳುತ್ತಾರೆ. ಸಂಘದ ಶಿಕ್ಷಾ ವರ್ಗದಲ್ಲಿ ಶಿಸ್ತು, ದೇಶಭಕ್ತಿ, ಸಂಸ್ಕಾರ, ಮೌಲ್ಯಗಳನ್ನು ಬೆಳೆಸಲಾಗುತ್ತದೆ. ಸರಳತೆಯೇ ಸಂಘದ ಕಾರ್ಯಕರ್ತರ ವಿಶೇಷ’ ಎಂದು ತಿಳಿಸಿದರು.

ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ ಮಾತನಾಡಿ, ‘ಕೆಲ ರಾಜಕಾರಣಿಗಳು ಅವರ ಸ್ವಾರ್ಥಕ್ಕಾಗಿ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸ್ವಯಂ ಸೇವಕ ಸಂಘ ಎಲ್ಲರನ್ನೂ ಒಗ್ಗೂಡಿಸಿ ಭವ್ಯ ಭಾರತ ಕಟ್ಟಲು ಶ್ರಮಿಸುತ್ತಿದೆ. ಅದಕ್ಕೆ ಎಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಹೇಳಿದರು.

ಸಂಘದ ಮುಖಂಡ ರಮೇಶ್‌ ನರೇಗಲ್‌ ಇದ್ದರು. ಇದಕ್ಕೂ ಮುನ್ನ ಗಣವೇಷಧಾರಿಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.