ADVERTISEMENT

ಹೊಸಪೇಟೆ: ಗಂಗಾಮತ ಭವನದಿಂದ ವಿಜಯನಗರ ಜಿಲ್ಲೆ ತನಕ

ಜಿಲ್ಲೆ ರಚನೆಯ ಕನಸು ಕಂಡ ಅನೇಕ ಹೋರಾಟಗಾರರು ಈಗಿಲ್ಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ನವೆಂಬರ್ 2020, 19:30 IST
Last Updated 27 ನವೆಂಬರ್ 2020, 19:30 IST
ವಿಜಯನಗರ ಜಿಲ್ಲೆ ರಚನೆಗೆ ಆಗ್ರಹಿಸಿ 2008ರಲ್ಲಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯಿಂದ ಹೊಸಪೇಟೆಯಲ್ಲಿ ನಡೆಸಿದ ಬೃಹತ್‌ ಪ್ರತಿಭಟನಾ ರ್‍ಯಾಲಿ
ವಿಜಯನಗರ ಜಿಲ್ಲೆ ರಚನೆಗೆ ಆಗ್ರಹಿಸಿ 2008ರಲ್ಲಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯಿಂದ ಹೊಸಪೇಟೆಯಲ್ಲಿ ನಡೆಸಿದ ಬೃಹತ್‌ ಪ್ರತಿಭಟನಾ ರ್‍ಯಾಲಿ   

ಹೊಸಪೇಟೆ: ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡಬೇಕೆಂಬ ಹೋರಾಟದ ಪಯಣ ಆರಂಭವಾಗಿದ್ದು ಇಲ್ಲಿನ ರಾಮ ಟಾಕೀಸ್‌ ಬಳಿಯ ಗಂಗಾಮತ ಸಮುದಾಯ ಭವನ ಎನ್ನುವುದು ವಿಶೇಷ.

ಡಾ. ಉಳ್ಳೇಶ್ವರ ಸೇರಿದಂತೆ ಬೆರಳೆಣಿಕೆಯ ಕೆಲ ಮುಖಂಡರು ಅನೌಪಚಾರಿಕವಾಗಿ ಜಿಲ್ಲೆ ರಚನೆ ಕುರಿತು ನಗರದ ವಕೀಲರ ಸಂಘದ ಕಚೇರಿಯಲ್ಲಿ ಚರ್ಚಿಸಿದ್ದರು. ಬಳಿಕ ಹೋರಾಟದ ಕೇಂದ್ರವಾಗಿ ಬದಲಾದದ್ದು ಗಂಗಾಮತ ಸಮುದಾಯ ಭವನ. ಅಷ್ಟೇ ಅಲ್ಲ, ಜಿಲ್ಲೆ ರಚನೆಯ ಹೋರಾಟಕ್ಕೆ ಮೊಟ್ಟ ಮೊದಲು ₹5,000 ದೇಣಿಗೆ ಕೊಟ್ಟಿದ್ದು ಕೂಡ ಗಂಗಾಮತಸ್ಥರು ಎನ್ನುವುದು ವಿಶೇಷ.

2005ರಲ್ಲಿ ಅಂದಿನ ಶಾಸಕ ರತನ್‌ ಸಿಂಗ್‌ ಅವರು ಇದೇ ಭವನದಲ್ಲಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಗೆ ಚಾಲನೆ ಕೊಟ್ಟಿದ್ದರು. ನಂತರ ಅದು ಹೋರಾಟದ ರೂಪುರೇಷೆ, ಸಭೆ, ಸಮಾಲೋಚನೆಗಳ ಶಕ್ತಿ ಕೇಂದ್ರವಾಗಿ ಬದಲಾಯಿತು.

ADVERTISEMENT

ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಮನವಿ ಪತ್ರ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ, ಅಧಿಕೃತವಾಗಿ ಅದು ದೊಡ್ಡ ಸ್ವರೂಪ ಪಡೆದಿದ್ದು 2007 ಮತ್ತು 2008ರ ಇಸ್ವಿಯಲ್ಲಿ. ದಿವಂಗತ ಕುರುಹಟ್ಟಿ ವೆಂಕಪ್ಪ, ಡಾ. ಉಳ್ಳೇಶ್ವರ, ಹುಸೇನ್‌ ತಂಬ್ರಹಳ್ಳಿ, ಕಾಸಿಂ ಷಾ ನಕ್ಷಾ ಬಂದಿ ಹೋರಾಟದ ಮುಂಚೂಣಿಯಲ್ಲಿದ್ದರು. ಅವರು ಕಂಡಿದ್ದ ಕನಸು ಈಗ ಸಾಕಾರಗೊಂಡಿದೆ. ಆದರೆ, ಅದನ್ನು ಕಣ್ತುಂಬಿಕೊಳ್ಳಲು ಅವರು ಜೀವಂತವಿಲ್ಲ.

ಇನ್ನುಳಿದಂತೆ ಸಮಿತಿಯಲ್ಲಿ ಅಂದಿನಿಂದ ಇಂದಿನವರೆಗೆ ಸಕ್ರಿಯವಾಗಿ ಇದ್ದವರು ಮುಖಂಡರಾದ ವೈ. ಯಮುನೇಶ, ಮಲ್ಲಾರಿ ದೀಕ್ಷಿತ್‌, ಎಸ್‌. ಗಾಳೆಪ್ಪ, ಮಡ್ಡಿ ಮಂಜುನಾಥ, ವಿಜಯಕುಮಾರ, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಎಂ.ಸಿ. ವೀರಸ್ವಾಮಿ, ಪಾಂಡುರಂಗ ಶೆಟ್ಟಿ, ಜಂಬಾನಹಳ್ಳಿ ವೆಂಕೋಬಣ್ಣ, ಬಾಬುಲಾಲ್‌ ಜೈನ್‌, ಶಿವಾನಂದ.

2007–08ರಲ್ಲಿ ನಡೆದ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ಸಿಕ್ಕಿತ್ತು. ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ, ಆಗಷ್ಟೇ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ ಆನಂದ್‌ ಸಿಂಗ್‌, ದೀಪಕ್‌ ಸಿಂಗ್‌, ಮೊಹಮ್ಮದ್‌ ಇಮಾಮ್‌ ನಿಯಾಜಿ ಸೇರಿದಂತೆ ಹಲವರು ಹೋರಾಟ ಬೆಂಬಲಿಸಿದ್ದರು.2008ರಲ್ಲಿ ಸತತ ನೂರು ದಿನಗಳ ವರೆಗೆ ನಡೆದ ಧರಣಿಯಲ್ಲಿ ನಗರದ ಎಲ್ಲ ಸಮುದಾಯ, ಸಂಘಟನೆಗಳವರು ಭಾಗವಹಿಸಿದ್ದರು. ಮೈಲಾರದಿಂದ ಹಂಪಿ ವರೆಗೆ ಬೈಕ್‌ ರ್‍ಯಾಲಿ, ಬೆಂಗಳೂರಿಗೆ ನಿಯೋಗ, ಪ್ರತಿಭಟನಾ ರ್‍ಯಾಲಿಗಳಿಗೆ ನಗರ ಸಾಕ್ಷಿಯಾಗಿತ್ತು.

ಆದರೆ, ಇದೇ ವೇಳೆ ಗಣಿಗಾರಿಕೆ ಮೂಲಕ ಜಿಲ್ಲೆ ದೊಡ್ಡ ಸದ್ದು ಮಾಡಿತ್ತು. ಆ ಸದ್ದಿನಲ್ಲಿ ಜಿಲ್ಲೆ ಪರವಾದ ಹೋರಾಟದ ಸದ್ದು ತಾತ್ಕಾಲಿಕವಾಗಿ ಅಡಗಿತ್ತು. ನಂತರ ಅನೇಕ ವರ್ಷ ಮನವಿ ಪತ್ರ ಸಲ್ಲಿಸುವುದಕ್ಕಷ್ಟೇ ಸೀಮಿತಗೊಂಡಿತ್ತು. ಆದರೆ, 2019ರ ಉಪಚುನಾವಣೆಯಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಇದೇ ವಿಷಯದ ಭರವಸೆ ಕೊಟ್ಟು ಗೆದ್ದರು. ಬಳಿಕ ಮಂತ್ರಿಯಾಗಿ, ನುಡಿದಂತೆ ನಡೆದು ರಾಜಕೀಯ ಇಚ್ಛಾಶಕ್ತಿ ತೋರಿದ್ದಾರೆ.

‘ಜಿಲ್ಲೆ ರಚನೆಗೆ ಆರಂಭದಲ್ಲಿ ಇದ್ದ ಉತ್ಸಾಹ ನಂತರದ ವರ್ಷಗಳಲ್ಲಿ ಕಂಡು ಬರಲಿಲ್ಲ. ಆದರೆ, ಆರಂಭದಲ್ಲಿ ಗಂಗಾಮತ ಸಮುದಾಯ ಭವನ ಪ್ರಮುಖ ಕೇಂದ್ರವಾಗಿತ್ತು. ಅಂದಿನ ಹೋರಾಟಕ್ಕೆ ಎಲ್ಲ ಸಮುದಾಯ, ಪಕ್ಷದವರು ಬೆಂಬಲ ಕೊಟ್ಟಿದ್ದು ವಿಶೇಷವಾಗಿತ್ತು. ಅಂತಿಮವಾಗಿ ಆನಂದ್‌ ಸಿಂಗ್‌ ಅವರು ರಾಜಕೀಯ ಇಚ್ಛಾಶಕ್ತಿ ಮೂಲಕ ಜಿಲ್ಲೆಯ ಕನಸು ನನಸಾಗಿಸಿದ್ದಾರೆ. ವಿಜಯೋತ್ಸವದ ಜತೆಗೆ ಹೋರಾಟಕ್ಕೆ ಶ್ರಮಿಸಿದವರನ್ನು ನೆನೆಯುವ ಕೆಲಸ ಕೂಡ ಆಗಬೇಕಿದೆ’ ಎನ್ನುತ್ತಾರೆ ಸಮಿತಿಯ ಮುಖಂಡರಾದ ವೈ. ಯಮುನೇಶ್‌, ನಿಂಬಗಲ್‌ ರಾಮಕೃಷ್ಣ ಇತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.