ADVERTISEMENT

ಬಳ್ಳಾರಿ:ಗ್ರಾ.ಪಂ ಅಧಿಕಾರವಧಿ ವಿಸ್ತರಿಸಲು ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟ ಆಗ್ರಹ

ಆಡಳಿತಾಧಿಕಾರಿಗಳನ್ನು ನೇಮಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 1:54 IST
Last Updated 22 ಜನವರಿ 2026, 1:54 IST
ಬಾಣಾಪುರ ನಾಗರಾಜ್‌
ಬಾಣಾಪುರ ನಾಗರಾಜ್‌   

ಬಳ್ಳಾರಿ: ರಾಜ್ಯದ ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮಾರ್ಚ್‌ ಹೊತ್ತಿಗೆ ಪೂರ್ಣಗೊಳ್ಳುತ್ತಿದ್ದು, ರಾಜ್ಯ ಸರ್ಕಾರ ಆಡಳಿತ ಅಧಿಕಾರಿಗಳನ್ನು ನೇಮಿಸುವ ಬದಲು ಹಾಲಿ ಪಂಚಾಯಿತಿ ಆಡಳಿತ ಸಮಿತಿಗೆ 6 ತಿಂಗಳವರೆಗೆ ಸೇವಾಧಿಕಾರ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಾಣಾಪುರ ನಾಗರಾಜ್‌ ಹಾಗೂ ಸಂಘಟನೆಯ ರಾಜ್ಯ ಖಜಾಂಚಿ ಹೇಮಾ ಮಂಜುನಾಥ್ ಸರ್ಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.

ಆಡಳಿತಾವಧಿ‌ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ’ದನ್ವಯ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸರ್ಕಾರ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಅಧಿಕಾರಿಗಳ ಕೈಗೆ ಪಂಚಾಯಿತಿ ವ್ಯವಸ್ಥೆ ನೀಡುವ ಮೂಲಕ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ ಅಧಿನಿಯಮ 1933ರ ಪ್ರಕರಣ 8(1) ಬಿ(ಐ) ಅನ್ವಯ ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನೊಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡಲು ಅವಕಾಶವಿದೆ. ಜೆ.ಎಚ್‌.ಪಾಟೀಲ್‌, ಎಂ.ಪಿ.ಪ್ರಕಾಶ್ ಪಂಚಾಯತ್ ರಾಜ್ ಸಚಿವರಾಗಿದ್ದಾಗ ಪಂಚಾಯಿತಿಯ ಆಡಳಿತ ಅವಧಿಯನ್ನು 6 ತಿಂಗಳ ಕಾಲ ವಿಸ್ತರಿಸುವ ಜನಪರವಾದ ನಿಲುವು ಕೈಗೊಂಡಿದ್ದರು’ ಎಂದರು. 

ADVERTISEMENT

‘ಸಿದ್ಧರಾಮಯ್ಯನವರು ಇಂಥ ನಿರ್ಧಾರ ಕೈಗೊಳ್ಳದೆ ಅಧಿಕಾರಿಗಳ ಹಿಡಿತದಲ್ಲಿ ಪಂಚಾಯಿತಿಗಳನ್ನು ನೀಡಲು ಮುಂದಾಗಿದ್ದಾರೆ. 2020ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಅವರು ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಿಸದೆ, ಇರುವ ಹಾಲಿ ಆಡಳಿತ ಸಮಿತಿಗೆ 6 ತಿಂಗಳ ಕಾಲ ಸೇವಾಧಿಕಾರ ನೀಡಬೇಕು’ ಎಂದು ಸುದ್ದಿಗೋಷ್ಠಿ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದರು ಎಂದು ನೆನಪಿಸಿದರು. 

‘ಯಾವುದೇ ಕಾರಣಕ್ಕೂ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಬಾರದು ಎಂದು ಒತ್ತಾಯಿಸಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಪಂಚಾಯತ್ ರಾಜ್ಯ ಸಚಿವರಿಗೆ ಒಕ್ಕೂಟದಿಂದ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಯಾವುದೇ ಸೂಕ್ತ ನಿರ್ಧಾರಕ್ಕೆ ಬರಲಾಗಿಲ್ಲ. ಇದೇ ವಿಚಾರವಾಗಿ ಜ.21ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಪಂಚಾಯಿತಿ ಒಕ್ಕೂಟ ಬೇಡಿಕೆಯಂತೆಯೇ ಅವಧಿ ವಿಸ್ತರಣೆಯ ನಿರ್ಧಾರ ಪ್ರಕಟಿಸಬೇಕು. ಇಲ್ಲದೇ ಹೋದರೆ ಹೋರಾಟದ ಜೊತೆಗೆ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶ್ರೀಧರ್, ಹಂದಿಹಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಗಣೇಶ್ ಹಾಗೂ ಲಕ್ಷ್ಮಿ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.