ಹಗರಿಬೊಮ್ಮನಹಳ್ಳಿ ಸಮೀಪದ ಚಿಂತ್ರಪಳ್ಳಿ ಕೆರೆಯ ಆವರಣದಲ್ಲಿ ಇರುವ ಇಟ್ಟಿಗೆ ತಯಾರಿಕೆ ಬಟ್ಟಿಗಳು
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿರುವ ಮಾಲವಿ ಜಲಾಶಯ ಮತ್ತು 14 ಏತ ನೀರಾವರಿ ಯೋಜನೆಗಳನ್ನು ಹೊರತುಪಡಿಸಿದರೆ, 19 ಕೆರೆಗಳೇ ರೈತರ ಜೀವನಾಡಿಯಾಗಿವೆ. ಅದರೆ ಅವುಗಳಿಗೆ ಧಕ್ಕೆ ಉಂಟಾಗುವ ಸ್ಥಿತಿ ಎದುರಾಗಿದೆ.
ಸಂಗ್ರಹಗೊಂಡ ನೀರು ಕೊಳವೆ ಬಾವಿಗಳಲ್ಲಿನ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗುತ್ತದೆ. ಇಂಗು ಗುಂಡಿಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಕೆರೆಗಳ ಒತ್ತುವರಿ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಕೆರೆಗಳ ಪಾತ್ರದಲ್ಲಿ ಕೃಷಿ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ, ರೈತರು ಕೆರೆಗಳನ್ನು ಅಕ್ರಮಿಸಿಕೊಂಡು ಜಮೀನುಗಳನ್ನಾಗಿಸಿಕೊಂಡಿದ್ದಾರೆ, ಕೆಲವು ಕಡೆಗಳಲ್ಲಿ ಅಧಿಕೃತವನ್ನಾಗಿಸಿ ಕೊಳ್ಳಲು ಸಾಗುವಳಿ ಚೀಟಿ ಪಡೆಯಲು ಯತ್ನಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಹಂಪಾಪಟ್ಟಣದ ತಿಗಳನ ಮತ್ತು ಭೀಮನ ಕೆರೆ, ಹಲಗಾಪುರ, ಉಪ್ಪಾರಗಟ್ಟೆ, ಕೇಶವರಾಯನಬಂಡಿ, ಬೆಣ್ಣೆಕಲ್ಲು, ಓಬಳಾಪುರ, ಗೌಡನ ಕುಂಟೆ ಕೆರೆ ಸೇರಿದಂತೆ 9 ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬನ್ನಿಕಲ್ಲು, ಮುಟುಗನಹಳ್ಳಿ, ಜಿ.ಕೋಡಿಹಳ್ಳಿ, ಚಿಂತ್ರಪಳ್ಳಿ, ದಶಮಾಪುರ, ಬೆಣ್ಣೆಕಲ್ಲು, ಹನಸಿ, ಮಗಿಮಾವಿನಹಳ್ಳಿಯ ಎರಡು ಕೆರೆಗಳು, ಹೊಸಕೆರೆ ಗ್ರಾಮದ ಕೆರೆ ಸೇರಿ ಒಟ್ಟು 10 ಕೆರೆಗಳಿವೆ.
ಹಂಪಾಪಟ್ಟಣದ ಭೀಮನ ಮತ್ತು ತಿಗಳನ ಕೆರೆಯಲ್ಲಿ 50ಕ್ಕೂ ಹೆಚ್ಚು ರೈತರು ಅನಧಿಕೃತವಾಗಿ ಉಳುಮೆ ಮಾಡುತ್ತಿದ್ದಾರೆ. ನೂರಾರು ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ಹೂಳು ಸಂಗ್ರಹಗೊಂಡು ನೀರು ಸಂಗ್ರಹಕ್ಕೆ ತೊಡಕಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ ರೈತರಿಗೆ ತಮ್ಮ ಜಮೀನುಗಳಲ್ಲಿ ಕೆರೆ ನೀರು ಹಾಯಿಸಲು ಆಗುತ್ತಿಲ್ಲ. ಕೇವಲ ಅಂತರ್ಜಲ ಅಭಿವೃದ್ಧಿಗೆ ಮತ್ತು ಜಾನುವಾರುಗಳಿಗೆ ನೀರು ಕುಡಿಯಲಷ್ಟೇ ಸಾಧ್ಯವಾಗಿದೆ.
ವರ್ಷಗಟ್ಟಲೇ ಬತ್ತದ ಕೆರೆಗಳು ಈಗ ಅಲ್ಪ ಪ್ರಮಾಣದ ಮಳೆಯಾದರೂ ಭರ್ತಿಯಾಗುತ್ತಿವೆ. ಒತ್ತುವರಿ ಕಾರಣದಿಂದಾಗಿ ಕೆರೆಯ ಮೂಲ ಉದ್ಧೇಶ ಮಾಯವಾಗಿದೆ. ಬಹುತೇಕ ಎಲ್ಲ ಕೆರೆಗಳನ್ನೂ ಒತ್ತುವರಿ ಮಾಡಲಾಗಿದೆ, ಕೆಲವು ಕಡೆಗಳಲ್ಲಿ ಇಟ್ಟಿಗೆ ತಯಾರಿಸುವ ಬಟ್ಟಿಗಳು ಎಲ್ಲೆಂದರಲ್ಲಿ ಎದ್ದುನಿಂತಿವೆ.
ಮಗಿಮಾವಿನಹಳ್ಳಿಯ ಉಡುಸಲಮ್ಮ ಕೆರೆ, ಐತಿಹಾಸಿಕ ಹಂಪಾಪಟ್ಟಣದ ತಿಗಳನ ಕೆರೆ, ಭೀಮನ ಕೆರೆ, ಓಬಳಾಪುರ, ಬೆಣ್ಣೆಕಲ್ಲು, ಹನಸಿ, ಚಿಂತ್ರಪಳ್ಳಿ, ಬನ್ನಿಕಲ್ಲು ಕೆರೆಗಳಿಗೆ ನೀರು ಬಂದಿದೆ. ಇದರಿಂದಾಗಿ ಪಾತಾಳಕ್ಕಿಳಿದಿದ್ದ ನೂರಾರು ಕೊಳಬಾವಿಗಳಲ್ಲಿನ ಅಂತರ್ಜಲ ಮರುಪೂರಣಗೊಂಡಿದೆ, ಆದರೆ ಕೆರೆಗಳ ನೀರು ಸಂಗ್ರಹದ ಸಾಮರ್ಥ್ಯ ಕುಂಠಿತಗೊಂಡಿದೆ.
ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎನ್ನುತ್ತಾರೆ ಕೆರೆಗಳ ಅಚ್ಚುಕಟ್ಟು ಪ್ರದೇಶದ ರೈತರು.
ಕ್ಷೇತ್ರದಲ್ಲಿರುವ ಕೆರೆಗಳ ಸಮರ್ಪಕ ನಿರ್ವಹಣೆಗಾಗಿ ಅಧಿಕಾರಿಗಳಿಗೆ ಸೂಚಿಸಲಾಗುವುದು. 17 ಕೆರೆಗಳಿಗೆ ನೀರು ತರುವ ಯೋಜನೆಗೆ ಅನುದಾನ ಒದಗಿಸುವಂತೆ ಸರ್ಕಾರದ ಗಮನ ಸೆಳೆಯಲಾಗಿದೆಕೆ.ನೇಮರಾಜ ನಾಯ್ಕ, ಶಾಸಕ
ಕೆರೆಗಳ ನಿರ್ವಹಣೆ ಮತ್ತು ಹಂಚಿಕೆ
l ಕೆರೆಯ ವಿಸ್ತೀರ್ಣ 40 ಹೆಕ್ಟೇರ್‌ವರೆಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗ
l 40ರಿಂದ 200 ಹೆಕ್ಟೇರ್‌ವರೆಗೂ ಸಣ್ಣ ನೀರಾವರಿ ಇಲಾಖೆ
l 200 ಹೆಕ್ಟೇರ್ ಮೇಲ್ಪಟ್ಟು ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.