
ಹಗರಿಬೊಮ್ಮನಹಳ್ಳಿ: ರಸ್ತೆ ಸುರಕ್ಷತೆ ಕುರಿತು ಮೊದಲು ಪೊಲೀಸರಿಗೆ ಬಳಿಕ ಜನಪ್ರತಿನಿಧಿಗಳಿ ಪಾಠ ಮಾಡಬೇಕು ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನೆಲ್ ವಕೀಲ ಎಚ್.ಆಂಜನೇಯ ಹೇಳಿದರು.
ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿಪೂರ್ವ ಕಾಲೇಜ್‍ನಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಜಾಗೃತಿ ಅಭಿಯಾನದಲ್ಲಿ ಅವರು ಉಪನ್ಯಾಸ ನೀಡಿದರು.
ಪಟ್ಟಣದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಎಲ್ಲೆಂದರಲಿ ವಾಹನಗಳು ನಿಲುಗಡೆಯಾಗಿದ್ದರೂ ಅದನ್ನು ತಡೆಯುವ ಗೋಜಿಗೆ ಪೊಲೀಸರು ಸೇರಿದಂತೆ ಯಾರೂ ಹೋಗಿಲ್ಲ, ಪಾದಾಚಾರಿ ರಸ್ತೆಯೂ ಕಾಣೆಯಾಗಿದೆ ಎಂದರು. ರಸ್ತೆಗಳು ದುರಸ್ತಿಯಾಗದ ಕಾರಣಕ್ಕಾಗಿ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ, ಜನಪ್ರತಿನಿಧಿಗಳು ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಅವಘಡಗಳ ಅಪಾಯದಿಂದ ವಾಹನಗಳ ಸವಾರರನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು, ಧನಾತ್ಮಕ ಚಿಂತನೆಗಳು ಮತ್ತು ಅಲೋಚನೆಗಳು ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ ಆದ್ದರಿಂದ ಆಲೋಚನೆಗಳ ಮೇಲೆ ಹಿಡಿತ ಇರಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ.ಎಂ.ಕೆ.ದುರುಗಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಡಿ.ಮಂಜಣ್ಣ, ಜಂಟಿ ಕಾರ್ಯದರ್ಶಿ ಕೆ.ಪ್ರಹ್ಲಾದ್, ಉಪನ್ಯಾಸಕ ಎಂ.ಹುಲುಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.