ADVERTISEMENT

ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿಧಾಮಕ್ಕೆ ಬಿಎನ್‍ಎಚ್‍ಎಸ್ ತಂಡ

​ಪ್ರಜಾವಾಣಿ ವಾರ್ತೆ
Published 4 ಮೇ 2025, 20:41 IST
Last Updated 4 ಮೇ 2025, 20:41 IST
<div class="paragraphs"><p>ಪಕ್ಷಿಧಾಮ</p></div>

ಪಕ್ಷಿಧಾಮ

   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ರಾಮ್‍ಸಾರ್ ತಾಣ ಖ್ಯಾತಿಯ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮ ಮತ್ತು ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ಬಾಂಬೆ ನ್ಯಾಚುರಲ್‍ ಹಿಸ್ಟರಿ ಸೊಸೈಟಿ (ಬಿಎನ್‍ಎಚ್‍ಎಸ್)ಯ ಸಂಶೋಧಕರ ತಂಡ ಭಾನುವಾರ ಭೇಟಿ ನೀಡಿ, ಪಟ್ಟಣದ ಗ್ರೀನ್ ಎಚ್‍ಬಿಎಚ್ ತಂಡ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಪಕ್ಷಿಗಳು ಮತ್ತು ಅದರ ಜೀವವೈವಿಧ್ಯತೆಯನ್ನು ವೈಜ್ಞಾನಿಕವಾಗಿ ದಾಖಲಿಸುವ ಸಮೀಕ್ಷೆಗೆ ಮುಂದಾಗಿದೆ.

ಸೊಸೈಟಿಯ ಉಪ ನಿರ್ದೇಶಕ ಸುಜಿತ್ ಎಸ್.ನರ್ವಾಡೆ ಮಾತನಾಡಿ, ‘ಪಕ್ಷಿಧಾಮದದಲ್ಲಿರುವ ಸ್ಥಳೀಯ ಮತ್ತು ದೇಶ ವಿದೇಶಗಳಿಂದ ವಲಸೆ ಬರುವ ನೂರಾರು ಪ್ರಭೇದಗಳ ಪಕ್ಷಿಗಳ ಆವಾಸ ಸ್ಥಾನ, ಸಂತಾನೋತ್ಪತ್ತಿ, ಪಕ್ಷಿಗಳ ಜೀವ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತಂತೆ ನಿಖರ ಮಾಹಿತಿಯನ್ನು ದಾಖಲಿಸಲಾಗುವುದು. ಅಪರೂಪದ ಪಕ್ಷಿಗಳಿಗೆ ರಿಂಗ್ ಹಾಕಿ, ಉಪಗ್ರಹ ಆಧಾರಿತ ಅಧ್ಯಯನ ನಡೆಸಲಾಗುವುದು, ಸೈಬೀರಿಯಾದಿಂದ ವಲಸೆ ಬರುವ ಪಕ್ಷಿಗಳಿಗೆ ಇರುವ ಅಪಾಯಗಳ ಕುರಿತಂತೆ ಅಧ್ಯಯನ ನಡೆಸಲಾಗುವುದು. ಎರಡು ವರ್ಷಗಳಲ್ಲಿ ಸಮಗ್ರವಾಗಿ ವೈಜ್ಞಾನಿಕವಾಗಿ ನಿಖರವಾಗಿ ಅಧ್ಯಯನ ನಡೆಸಿ ವರದಿ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಅಪರೂಪದ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿಗೆ ಮುಂದಾಗಿರುವುದು ವಿಶೇಷ, ಬಣ್ಣದ ಕೊಕ್ಕರೆ(ಪೇಂಟೆಂಡ್ ಸ್ಟಾರ್ಕ್), ಹೆಜ್ಜಾರ್ಲೆ(ಪೆಲಿಕಾನ್) ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವುದು ಗಮನಾರ್ಹವಾಗಿದೆ’ ಎಂದರು.

ತಾಲ್ಲೂಕಿನ ನಾರಾಯಣ ದೇವರಕೆರೆ, ನಕರಾಳ್ ತಾಂಡಾದ ಬಳಿಯ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿದ ತಂಡದ ಸದಸ್ಯರು ಬ್ಲೂಟೇಲ್ಡ್ ಬೀ ಈಟರ್, ಓರಿಯಂಟಲ್ ಪ್ರಾಟಿನ್ಕೋಲ್, ಸ್ಮಾಲ್ ಪ್ರಾಟಿನ್ಕೋಲ್ ಪಕ್ಷಿಗಳ ಗೂಡು ಕಟ್ಟುವಿಕೆ ಮತ್ತು ಸಂತಾನೋತ್ಪತ್ತಿಯ ತಾಣಗಳನ್ನು ಗುರುತಿಸಿದರು. ಜಿಪಿಎಸ್ ನಕ್ಷೆ ದಾಖಲಿಸಿ ಬಾನಾಡಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಗ್ರೀನ್ ಎಚ್‍ಬಿಎಚ್ ತಂಡದ ಸದಸ್ಯರಿಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.