ಹಗರಿಬೊಮ್ಮನಹಳ್ಳಿ: ವಿಧಾನಸಭಾ ಕ್ಷೇತ್ರದ 17 ಕೆರೆಗಳಿಗೆ ಶಾಶ್ವತ ನೀರೊದಗಿಸುವ ಯೋಜನೆ ಆರಂಭಿಸುವಂತೆ ಒತ್ತಾಯಿಸಿ ನ.9ರಂದು ಕೂಡ್ಲಿಗಿಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು ನೂರಾರು ಬೈಕ್‍ಗಳೊಂದಿಗೆ ರೈತರು ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಕೃಷಿ ಭೂಮಿ ಉಳಿವುಗಾಗಿ ನಾವು ಸಂಘಟನೆಯ ಸಂಚಾಲಕ ಬುಡ್ಡಿ ಬಸವರಾಜ ಹೇಳಿದರು.
ತಾಲ್ಲೂಕಿನ ಮಗಿಮಾವಿನಹಳ್ಳಿ ಗ್ರಾಮದಲ್ಲಿ ಮಠಾಧೀಶರ ಪರಿಷತ್ ಮತ್ತು ಕೃಷಿಭೂಮಿ ಉಳುವಿಗಾಗಿ ನಾವು ಸಂಘಟನೆಯ ನೇತೃತ್ವದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
ಕೆರೆಗೆ ನೀರು ತರುವ ಸಲುವಾಗಿ ನೀರಾವರಿ ನಿಗಮದಿಂದ 2018ರಲ್ಲಿ ಸಮಗ್ರ ಯೋಜನಾ ವರದಿ(ಡಿಪಿಆರ್) ಸಲ್ಲಿಸಲು ₹32ಲಕ್ಷ ರೂಪಾಯಿ ವ್ಯಯ ಮಾಡಲಾಗಿದೆ. 2024ರಲ್ಲಿ ನೀಡಿದ ವರದಿ ಅನ್ವಯ ಯೋಜನೆಗೆ ₹628ಕೋಟಿ ಅಂದಾಜು ಅನುದಾನದ ಅಗತ್ಯವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ವರ್ಷಕ್ಕೆ ₹1ಸಾವಿರ ಕೋಟಿ ಅನುದಾನ ಬೇಕಾಗಬಹುದು. ಆದರೆ, ಸರ್ಕಾರ ದೊಡ್ಡ ಮೊತ್ತವಾದ್ದರಿಂದ ಯೋಜನೆಯನ್ನು ಕೈ ಚೆಲ್ಲಬಹುದು. ಆದ್ದರಿಂದ ಇದೇ ವರ್ಷ ಯೋಜನೆಯ ಕಾಮಗಾರಿ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದರು.
ಬೇಡಿಕೆ ಈಡೇರಿಕೆಗಾಗಿ 17ಕೆರೆಗಳ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ, ರೈತರ ಯೋಜನೆಗಳ ಹೋರಾಟಕ್ಕೆ ಮಠಾಧೀಶರು ಭಾಗವಹಿಸಿದ್ದಕ್ಕೆ ಹೋರಾಟದ ಕಿಚ್ಚು ಹೆಚ್ಚಿದೆ, ಹೋರಾಟದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು, ಬೈಕ್ ರ್ಯಾಲಿಯಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಸೇರಬೇಕು ಎಂದು ವಿನಂತಿಸಿಕೊಂಡರು. ಇದಕ್ಕೂ ಮುನ್ನ ಓಬಳಾಪುರ, ಹಲಗಾಪುರ ಗ್ರಾಮಗಳಲ್ಲಿ ಸಭೆ ನಡೆಸಿ ಹೋರಾಟ ಸಮಿತಿ ರಚಿಸಲಾಯಿತು.
ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ಹನಸಿ-ಉತ್ತಂಗಿಯ ಸೋಮಶೇಖರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಗದ್ದಿಕೇರಿಯ ಚರಂತೇಶ್ವರ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಹನಸಿ ಕೊಟ್ರೇಶ್, ಪ್ರಭುಸ್ವಾಮೀಜಿ, ಬ್ಯಾಲಾಳು ನಿಂಗಪ್ಪ, ಕೆ.ಎಂ.ವಿಶ್ವನಾಥಯ್ಯ, ಬಣಕಾರ ರಮೇಶ್, ಕರಿಬಸಯ್ಯ, ಮಲ್ಲಿಕಾರ್ಜುನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.