ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಘವೇಂದ್ರ ದೇವಸ್ಥಾನದ ಬಳಿ 14ಮತ್ತು 17ನೇ ವಾರ್ಡ್‍ಗಳಿಗೆ ಸಂಬಂಧಿಸಿದ ನಿವೇಶನದಲ್ಲಿ ಉದ್ಯಾನ ನಿರ್ಮಾಣಕ್ಕಿಟ್ಟ ಅನುದಾನ ಸಂಪೂರ್ಣ ಖರ್ಚಾದರೂ ಕಾಮಗಾರಿ ಮಾತ್ರ ಅಪೂರ್ಣವಾಗಿದೆ. ಉದ್ಯಾನದ ಮೂಲ ಉದ್ಧೇಶ ಇಲ್ಲಿ ಮಾಯವಾಗಿದೆ. ಉದ್ಘಾಟನೆ ಮುಂಚೆಯೇ ಆಟಿಕೆ ಸಾಮಾನುಗಳು ಕಿತ್ತು ಹೋಗಿವೆ.
₹1ಕೋಟಿ ರೂಪಾಯಿ ಅಂದಾಜು ಮೊತ್ತದ ಉದ್ಯಾನ ಅರೆಬರೆ ಕಾಮಗಾರಿಗಳಿಂದ ಬಿಕೊ ಎನ್ನುತ್ತಿದೆ. ಜಿಲ್ಲಾ ಖನಿಜ ಪ್ರತಿಷ್ಠಾನದ ಯೋಜನೆಯ ಡಿಎಂಎಫ್ ಅನುದಾನದಲ್ಲಿ ಬೆಂಗಳೂರಿನ ಕರ್ನಾಟಕ ಸ್ಟೇಟ್ ಹೆಬೆಟೇಟ್ ಸೆಂಟರ್(ಕೆಎಸ್‍ಎಚ್‍ಸಿ)ಗೆ ನಿರ್ಮಾಣದ ಹೊಣೆ ನೀಡಲಾಗಿತ್ತು. ಸಂಸ್ಥೆಯು ತಾಳೆ ಬಸಾಪುರ ತಾಂಡಾದ ಗುತ್ತಿಗೆದಾರರೊಬ್ಬರಿಗೆ ಉಪಗುತ್ತಿಗೆ ನೀಡಿರುವುದು ಕಾಮಗಾರಿ ವಿಳಂಬಗೊಳ್ಳಲು ಕಾರಣ ಎನ್ನಲಾಗಿದೆ.
ಉದ್ಯಾನ ನಿರ್ಮಾಣದ ಹೊಣೆಯನ್ನು ಕೈಗೆತ್ತಿಕೊಂಡ ಗುತ್ತಿಗೆದಾರರ ಸುತ್ತುಗೋಡೆ ನಿರ್ಮಿಸಿ, ಕಾಲುದಾರಿಯಲ್ಲಿ ಪಾರ್ಕಿಂಗ್ ಟೈಲ್ಸ್ ಹಾಕಿ, ಐದಾರು ಮಕ್ಕಳ ಆಟಿಕೆ ಸಮಾನುಗಳನ್ನು ಇರಿಸಿ, ಎರಡು ಸಿಮೆಂಟ್ ಆಸನಗಳನ್ನು ಹಾಕಿ ಅರ್ಧಂಬರ್ಧ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ ಎನ್ನುವುದು ಅಲ್ಲಿನ ನಿವಾಸಿಗಳ ದೂರು.
’ಸುತ್ತು ಗೋಡೆ ಸರಿಯಾಗಿ ಕ್ಯೂರಿಂಗ್ ಆಗಿಲ್ಲ, ಕಾರ್ಮಿಕರಿಗೆ ಸರಿಯಾದ ಕೂಲಿಯನ್ನೂ ನೀಡಿಲ್ಲ, ಉದ್ಯಾನ ನಿರ್ಮಾಣದ ಮೂಲ ಉದ್ಧೇಶ ಇಲ್ಲಿ ಕಾಣುತ್ತಿಲ್ಲ’ ಎನ್ನುತ್ತಾರೆ ನಿವಾಸಿ ಕೊಟ್ರೇಶ್.
ಉದ್ಯಾನದ ಕ್ರಿಯಾಯೋಜನೆಯ ಅಂದಾಜು ಪಟ್ಟಿ ಯಾರೂ ಕೊಡುತ್ತಿಲ್ಲ, ಕೋಟಿ ಅನುದಾನ ಮಾತ್ರ ನೀರಿನಂತೆ ಖರ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ, ಈ ಕುರಿತಂತೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಹೇಳುತ್ತಾರೆ.
ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಪ್ರವೇಶದ್ವಾರ ನಿರ್ಮಾಣದ ವಿಚಾರದಲ್ಲಿ ಗೊಂದಲ ಉಂಟಾಗಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ.ರಾಜೇಶ್‍ನಾಯ್ಕ, ಕೆಎಸ್‍ಎಚ್‍ಸಿ ಎಂಜಿನಿಯರ್
‘ನನಗೆ ಕೇವಲ ₹30ಲಕ್ಷ ನೀಡಿದ್ದರೆ ಉದ್ಯಾನವನದ ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಿದ್ದೆ. ₹1ಕೋಟಿ ಖರ್ಚಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಏಳು ತಿಂಗಳಾದರೂ ಹಾಗೆ ಉಳಿದಿದೆ. ಗುತ್ತಿಗೆದಾರರು ಬರೀ ಸುಳ್ಳು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಉದ್ಯಾನದ ನಿವೇಶನ ಎರಡೂ ವಾರ್ಡ್‍ಗಳಿಗೆ ಸಂಬಂಧಿಸಿದ್ದರಿಂದ ಎರಡೂ ಕಡೆಗಳಲ್ಲಿ ಪ್ರವೇಶ ದ್ವಾರ ನಿರ್ಮಿಸಬೇಕು’ ಎಂದು 17ನೇವಾರ್ಡ್ ನಿವಾಸಿ ದಾದಾಪೀರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.