ಹಗರಿಬೊಮ್ಮನಹಳ್ಳಿ: ‘ನಾಲ್ಕು ಎಕರೆ ಮೆಕ್ಕೆಜೋಳಕ್ಕೆ ಯೂರಿಯಾ ರಸಗೊಬ್ಬರ ಹಾಕಲೇಬೇಕು, ಈಗ ನಾಲ್ಕು ದಿನಗಳಿಂದ ಕೆಲಸ ಬಿಟ್ಟು ಅಂಗಡಿಗಳಿಗೆ ಅಲೆಯುತ್ತಿದ್ದರೂ ಒಂದು ಚೀಲ ಗೊಬ್ಬರ ಸಿಗುತ್ತಿಲ್ಲ, ಸರತಿ ಸಾಲಿನಲ್ಲಿ ನಿಂತರೂ ನೂಕಾಟ ತಳ್ಳಾಟದಿಂದ ಸಾಕಾಗಿದೆ, ನಮ್ಮ ಗೋಳು ಯಾರೂ ಕೇಳದಾಗಿದ್ದಾರೆ’ ಹೀಗೆ ತಮ್ಮ ಅಳಲು ತೋಡಿಕೊಂಡವರು ಮೋರಿಗೇರಿಯ ರೈತ ಮಹಿಳೆ ಲಕ್ಷ್ಮಮ್ಮ, ಇಂಥಹ ರೈತರ ಗೋಳು ದಿನಾಲು ಇಲ್ಲಿ ಸಾಮಾನ್ಯವಾಗಿದೆ.
ಪಟ್ಟಣದ ಗೊಬ್ಬರದ ಅಂಗಡಿಗಳಿಗೆ ಸರಬರಾಜಾಗುವ ಯೂರಿಯಾ ರಸಗೊಬ್ಬರ ಕೇವಲ ಒಂದೇ ಗಂಟೆಯಲ್ಲಿ ಖಾಲಿಯಾಗುತ್ತದೆ, ಈ ಕುರಿತಂತೆ ರೈತರು ಪ್ರಶ್ನೆಸಿದರೆ ಯಾರೊಬ್ಬರೂ ಉತ್ತರ ನೀಡದಾಗಿದ್ದಾರೆ, ಬಂದ ದಾರಿಗೆ ಸುಂಕವಿಲ್ಲದಂತೆ ವಿವಿಧ ಗ್ರಾಮಗಳಿಂದ ಬರುವ ನೂರಾರು ರೈತರು ಬರಿಗೈಯಿಂದ ವಾಪಾಸಾಗುವುದು ಇಲ್ಲಿ ಸರ್ವೇಸಾಮಾನ್ಯವಾಗಿದೆ. ಕೆಲವೇ ಗಂಟೆಗಳಲ್ಲಿ ಖಾಲಿಯಾಗುವ ರಸಗೊಬ್ಬರವನ್ನು ಪೊಲೀಸರ ಸರ್ಪಗಾವಲಿನವಲ್ಲಿ ವಿತರಣೆಯಾಗುವುದು ಕೆಲವರಿಗೆ ಮಾತ್ರ.
ತಾಲ್ಲೂಕಿನಲ್ಲಿ ನೀರಾವರಿ ಮತ್ತು ಖುಷ್ಕಿ ಸೇರಿ ಒಟ್ಟು 35ಸಾವಿರ ಹೆಕ್ಟೇರ್ ಮೆಕ್ಕೆಜೋಳ ಮತ್ತು 1180ಹೆಕ್ಟೇರ್ ಸಜ್ಜೆ ಬಿತ್ತನೆಯಾಗಿದ್ದು ಉತ್ತಮವಾಗಿ ಬೆಳೆಯುವ ಹಂತದಲ್ಲಿದೆ, ಆದರೆ ಈಗ ಎರಡೂ ಬೆಳೆಗಳಿಗೆ ಅಗತ್ಯವಾಗಿ ಯೂರಿಯಾ ಬೇಕಾಗಿದೆ, ಮಳೆ ಇರುವಾಗಲೇ ರಸಗೊಬ್ಬರ ಹಾಕಬೇಕು, ಇಲ್ಲವಾದಲ್ಲಿ ಅದು ಹಾಕಿದರೂ ಅದು ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ ವಲ್ಲಭಾಪುರದ ರೈತ ಗವಿಸಿದ್ದಪ್ಪ.
ಜುಲೈ ತಿಂಗಳಲ್ಲಿ ಒಟ್ಟು ತಾಲ್ಲೂಕಿಗೆ 5800ಟನ್ ಯೂರಿಯಾ ರಸಗೊಬ್ಬರ ಪೂರೈಕೆ ಆಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ, ಆದರೆ ಇಂದಿಗೂ ರೈತರು ಪ್ರತಿದಿನ ಗೊಬ್ಬರದ ಅಂಗಡಿಗಳಿಗೆ ಅಲೆದಾಡುವುದು ತಪ್ಪಿಲ್ಲ, ಸರಬರಾಜು ಆಗಿರುವ ರಸಗೊಬ್ಬರ ಎಲ್ಲಿಗೆ ಹೋಗಿದೆ ಎನ್ನುವುದು ಪ್ರಶ್ನೆಯಾಗಿದೆ ಎನ್ನುತ್ತಾರೆ ರೈತ ಮುಖಂಡರು.
ತಾಲ್ಲೂಕಿನ ದೊಡ್ಡರೈತರು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿಗೆ ಬೇಕಾದ ಯೂರಿಯಾ ರಸಗೊಬ್ಬರವನ್ನು ಸಂಗ್ರಹಮಾಡಿಟ್ಟುಕೊಂಡಿರುವುದು ಸಮಸ್ಯೆಗೆ ಮೂಲ ಕಾರಣ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು. ರೈತರು ಪಟ್ಟಣದಲ್ಲಿ ಅಲೆದಾಡುವುದು, ರಸಗೊಬ್ಬರಕ್ಕಾಗಿ ಹರಸಾಹಸ ಪಡುವುದು ಇಲ್ಲಿ ಸಾಮಾನ್ಯ ದೃಶ್ಯಗಳಾಗಿವೆ.
ಯೂರಿಯಾ ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅನಗತ್ಯವಾಗಿ ಕೃತಕ ಸೃಷ್ಟಿಮಾಡುತ್ತಾರೆನ್ನುವ ಅನುಮಾನ ಇದೆ. ಈ ಕುರಿತಂತೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು– ದುರುಗಪ್ಪ ಆನಂದೇವನಹಳ್ಳಿ, ರೈತ
ರೈತರು ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಮಾಡಬಾರದು. ಇದು ಮುಖ್ಯವಾಗಿ ಕೊರತೆಗೆ ಕಾರಣವಾಗಿದೆ. ನ್ಯಾನೊ ಯೂರಿಯಾ ಸಿಂಪಡಣೆ ಮಾಡುವ ಕುರಿತಂತೆ ಪ್ರಾತ್ಯಿಕ್ಷಿಕೆ ನಡೆಯುತ್ತಿದೆ–ಎಚ್.ಸುನಿಲ್‍ಕುಮಾರ್ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.