
ತೆಕ್ಕಲಕೋಟೆ: ರಾಷ್ಟ್ರೀಯ ಹೆದ್ದಾರಿ 150 ಎ ಸಮೀಪದ ಹಳೇಕೋಟೆ ಗ್ರಾಮದ ಮಾರೆಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ ಪಲ್ಲಕ್ಕಿ ಉತ್ಸವ ಹಾಗೂ ಭಾನುವಾರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಸಂಪನ್ನಗೊಂಡಿತು.
ಭಾನುವಾರ ಬೆಳಿಗ್ಗೆ ಗಂಗಾಧರ ಸ್ವಾಮೀಜಿಗಳ 42ನೇ ವರ್ಷದ ಗಣಾರಾಧನೆ ನಂತರ ದೇವಿಗೆ ಹೋಮ, ಅರ್ಚನೆ ಮತ್ತು ಅಭಿಷೇಕ ಪೂಜೆ ನಡೆಯಿತು. ನಂತರ ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.
ಸಂಜೆ ಪೂಜಾರಿ ಈರಯ್ಯ ಅವರ ಮನೆಯಿಂದ ಡೊಳ್ಳು, ಕಳಸ ಸಕಲ ವಾದ್ಯ ಮೇಳ ಹಾಗೂ ಮಹಿಳೆಯರ ಕುಂಭದೊಂದಿಗೆ ದೇವಿಯ ಪಲ್ಲಕ್ಕಿಯನ್ನು ಮರಿಸ್ವಾಮಿ ಮಠದ ಮಲ್ಲಯ್ಯ ತಾತ ಅವರಲ್ಲಿಗೆ ತೆರಳಿತು ನಂತರ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ದೇವಸ್ಥಾನದಿಂದ ದೇವಿಯ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ನಂತರ ದೇವಿಯನ್ನು 5 ಸುತ್ತು ಪ್ರದಕ್ಷಿಣೆ ಹಾಕಿ ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಹೂಗಳು ಮತ್ತು ಹಸಿರು ತೋರಣಗಳಿಂದ ಅಲಂಕರಿಸಿದ ಭವ್ಯ ರಥಕ್ಕೆ ಮಲ್ಲಯ ತಾತ, ಈಡುಗಾಯಿ ಹೊಡೆದು ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಹಗ್ಗ ಹಿಡಿದು ರಥವನ್ನು ಎಳೆಯುತ್ತಿದ್ದಂತೆ ನೆರೆದ ಭಕ್ತಸಾಗರ ಹೂ, ಹಣ್ಣು–ಉತ್ತುತ್ತಿ ರಥಕ್ಕೆ ಎಸೆದು ಭಕ್ತಿ ಮೆರೆದರು. ಜಾತ್ರೆಯ ಅಂಗವಾಗಿ ರಾತ್ರಿ ಭಜನಾ ಕಾರ್ಯಕ್ರಮ ಆಯೋಜಸಲಾಗಿತ್ತು.
ಪ್ರಧಾನ ಅರ್ಚಕ ಗೋವಿಂದ ಸ್ವಾಮಿ, ಮುಖಂಡರಾದ ಬಿ.ಕೆ.ರಾಘು, ಅಂಗಯ್ಯ, ದೊಡ್ಡ ವೀರೇಶ, ನೆಣಿಕೆ ವೀರೇಶ ಸೇರಿದಂತೆ ಜಾತ್ರೆಗೆ ಹಳೇಕೋಟೆ, ಪಪ್ಪನಾಳು, ಹೆರಕಲ್ಲು ಗ್ರಾಮಗಳ ಭಕ್ತರು ಭಾಗವಹಿಸಿ ಹರಕೆ ತೀರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.