ADVERTISEMENT

ಪಶು–ಪಕ್ಷಿಗಳ ದಾಹ ನೀಗಿಸುವ ಸಂಕಲ್ಪ: ವಿಶಿಷ್ಟ ಕೆಲಸಕ್ಕೆ ಜನರ ಮೆಚ್ಚುಗೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಏಪ್ರಿಲ್ 2019, 19:45 IST
Last Updated 4 ಏಪ್ರಿಲ್ 2019, 19:45 IST
ತೊಟ್ಟಿಯಲ್ಲಿ ನೀರು ಸಂಗ್ರಹಿಸುತ್ತಿರುವ ಹಂಪಿ ಮಾರ್ಗದರ್ಶಿ ಬಿ. ರಮೇಶ
ತೊಟ್ಟಿಯಲ್ಲಿ ನೀರು ಸಂಗ್ರಹಿಸುತ್ತಿರುವ ಹಂಪಿ ಮಾರ್ಗದರ್ಶಿ ಬಿ. ರಮೇಶ   

ಹೊಸಪೇಟೆ: ಕಡು ಬೇಸಿಗೆಯಲ್ಲಿ ನೀರಿಲ್ಲದೆ ಪರದಾಡುತ್ತಿರುವ ಪಶು–ಪಕ್ಷಿಗಳ ದಾಹ ತಣಿಸಿ, ಅವುಗಳ ಜೀವ ಉಳಿಸಲು ಹಂಪಿ ಮಾರ್ಗದರ್ಶಿಗಳು ಸಂಕಲ್ಪ ಮಾಡಿದ್ದಾರೆ.

ಹಂಪಿಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನೀರಿನ ತೊಟ್ಟಿಗೆ ವ್ಯವಸ್ಥೆ ಮಾಡಿದ್ದಾರೆ. ಯಾರಿಗೆ ಕೆಲಸದ ನಡುವೆ ಬಿಡುವಿನ ಸಮಯ ಇರುತ್ತದೋ ಅವರು ಖುದ್ದಾಗಿ ತೊಟ್ಟಿಗಳನ್ನು ಇಟ್ಟಿರುವ ಜಾಗಕ್ಕೆ ಬಂದು ಅವುಗಳಲ್ಲಿ ನೀರು ತುಂಬಿಸಿ ಹೋಗುತ್ತಾರೆ.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ವಾಹನ ನಿಲುಗಡೆ ಜಾಗದ ಸಮೀಪ, ಸಾಸಿವೆಕಾಳು ಗಣಪ, ಕೃಷ್ಣ ದೇವಸ್ಥಾನ ಹಾಗೂ ಅಕ್ಕ ತಂಗಿಯರ ಗುಡ್ಡದ ಬಳಿ ತೊಟ್ಟಿಗಳನ್ನು ಇರಿಸಿದ್ದಾರೆ. ಬರುವ ದಿನಗಳಲ್ಲಿ ಇನ್ನಷ್ಟು ಕಡೆಗಳಲ್ಲಿ ತೊಟ್ಟಿಗಳನ್ನು ಇರಿಸಲು ಯೋಜನೆ ಹಾಕಿಕೊಂಡಿದ್ದಾರೆ.

ADVERTISEMENT

ಅಂದಹಾಗೆ, ಸಿಮೆಂಟ್‌ನಿಂದ ತಯಾರಿಸಿದ ನೀರಿನ ತೊಟ್ಟಿಗಳ ಖರೀದಿಗೆ ಬೇಕಾದ ಹಣವನ್ನು ಮಾರ್ಗದರ್ಶಿಗಳಾದ ವಿ. ಗೋಪಾಲ,ಬಿ. ರಮೇಶ, ಬಿ. ಶಿವ, ಎಚ್‌. ಬಸವರಾಜ, ಎಚ್‌. ಹುಲುಗಪ್ಪ ಅವರು ಸ್ವಂತ ಕಿಸೆಯಿಂದ ಭರಿಸಿದ್ದಾರೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಪಾಳಿ ರೂಪದಲ್ಲಿ ಬಂದು ತೊಟ್ಟಿಗಳಲ್ಲಿ ನೀರು ಸಂಗ್ರಹಿಸಿ ಹೋಗುತ್ತಾರೆ. ಹಂಪಿಯಲ್ಲೇ ಓಡಾಡಿಕೊಂಡು ಇರುವ ಇವರು, ಯಾರಿಗೆ ತೊಟ್ಟಿಯಲ್ಲಿ ನೀರು ಖಾಲಿಯಾಗಿರುವ ವಿಷಯ ಗೊತ್ತಾಗುತ್ತದೆಯೋ ಅವರು ಸ್ವಯಂಪ್ರೇರಣೆಯಿಂದ ಹೋಗಿ ನೀರು ತುಂಬಿಸುತ್ತಾರೆ. ಬೇರೆಯವರಿಗಾಗಿ ಕಾಯುವುದಿಲ್ಲ.

ತೊಟ್ಟಿಗಳನ್ನು ಇಟ್ಟಿರುವುದರಿಂದ ಹಂಪಿಯಲ್ಲಿ ಓಡಾಡುವ ದನ, ಕರುಗಳು, ಅನೇಕ ಪ್ರಭೇದದ ಪಕ್ಷಿಗಳ ದಾಹ ನೀಗುತ್ತಿದೆ. ಇದನ್ನು ಪುಣ್ಯದ ಕೆಲಸವೆಂದು ಮಾರ್ಗದರ್ಶಿಗಳು ಭಾವಿಸಿದ್ದಾರೆ.

‘ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ಪ್ರಮಾಣ ಹೆಚ್ಚಿದೆ. ಸ್ವಲ್ಪ ಹೊರಗೆ ಹೋಗಿ ಬಂದರೂ ಗಂಟಲು ಒಣಗಿ ಹೋಗುತ್ತಿದೆ. ಮನುಷ್ಯರ ಪಾಡೇ ಹೀಗಿದೆ. ಇನ್ನು ಪ್ರಾಣಿ, ಪಕ್ಷಿಗಳ ಸ್ಥಿತಿ ಹೇಗಿರಬಾರದು. ಇದನ್ನೇ ಮನಗಂಡು, ಪರಸ್ಪರ ನಾವೆಲ್ಲ ಚರ್ಚಿಸಿ, ಈ ನಿರ್ಧಾರಕ್ಕೆ ಬಂದು ನೀರಿನ ತೊಟ್ಟಿಗಳನ್ನು ಇರಿಸಿದ್ದೇವೆ’ ಎಂದು ಮಾರ್ಗದರ್ಶಿ ವಿ. ಗೋಪಾಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂಪಿಯಲ್ಲಿ ದನ–ಕರು, ನವಿಲುಗಳು, ಕರಡಿ, ಚಿರತೆ ಸೇರಿದಂತೆ ವಿವಿಧ ಜಾತಿಯ ಪ್ರಾಣಿ–ಪಕ್ಷಿ ಸಂಕುಲವೇ ನೆಲೆಸಿದೆ. ನೀರಿನ ದಾಹದಿಂದ ಯಾವುದೇ ಜೀವ ಹೋಗಬಾರದು. ಅದಕ್ಕಾಗಿ ಈ ಕಿರು ಸೇವೆ ಮಾಡುತ್ತಿದ್ದೇವೆ. ಯಾವುದೇ ಫಲಾಪೇಕ್ಷೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.