ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ವಯಸ್ಸು ಮೀರಿದರೂ ಕುಲಸಚಿವ ಹುದ್ದೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮಕ್ಕೆ ವಿರುದ್ಧ ಕುಲಸಚಿವರ ಮುಂದುವರಿಕೆ ಆರೋಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ನವೆಂಬರ್ 2021, 6:40 IST
Last Updated 24 ನವೆಂಬರ್ 2021, 6:40 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಪ್ರಕಾರ 58 ವರ್ಷ ವಯಸ್ಸಾದಾಗ ಕುಲಸಚಿವ ಹುದ್ದೆಗೆ ಯಾರನ್ನೂ ನೇಮಕ ಮಾಡುವಂತಿಲ್ಲ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಹಾಲಿ ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಅವರಿಗೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಸೇವಾ ನಿಬಂಧನೆಗಳು ಮತ್ತು ಷರತ್ತುಗಳು ನಿಯಮ 39 (ಈ) ಪ್ರಕಾರ, 58 ವರ್ಷ ವಯಸ್ಸಾದಾಗ ಅಥವಾ ಕಾರ್ಯಕಾರಿ ಸಮಿತಿಯು ನಿಗದಿಪಡಿಸಿದ ಅವಧಿಯು ಮುಗಿದಾಗ, ಇವುಗಳಲ್ಲಿ ಯಾವುದು ಮೊದಲೋ ಅದರ ಪ್ರಕಾರ ಕುಲಸಚಿವರು ಅಧಿಕಾರದಿಂದ ನಿವೃತ್ತರಾಗುತ್ತಾರೆ. ಇದರಲ್ಲಿ ಮೊದಲ ನಿಯಮ ಅನ್ವಯ ಆಗುವುದರಿಂದ ಆ ಸ್ಥಾನದಲ್ಲಿ ಅವರು ಮುಂದುವರಿಯುವಂತಿಲ್ಲ.

ಸುಬ್ಬಣ್ಣ ಅವರಿಗೆ ಈಗಾಗಲೇ 60 ವರ್ಷ ವಯಸ್ಸು ಮುಗಿದು 61 ನಡೆಯುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ವೇತನ ಪಡೆಯುತ್ತಿರುವ ಎಲ್ಲ ಬೋಧಕ ಸಿಬ್ಬಂದಿ ನಿವೃತ್ತಿ ವಯಸ್ಸು 62ಕ್ಕೆನಿಗದಿಪಡಿಸಲಾಗಿದೆ. 58 ವರ್ಷ ವಯಸ್ಸಾದ ನಂತರ ಕುಲಸಚಿವ ಆಗುವಂತಿಲ್ಲ.

ADVERTISEMENT

ಈ ಹಿಂದೆ ಎ. ಮುರುಗೆಪ್ಪ ಅವರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಮಂಜುನಾಥ ಬೇವಿನಕಟ್ಟಿ ಅವರು ಕುಲಸಚಿವರಾಗಿದ್ದರು. ಆದರೆ, ಉನ್ನತ ಶಿಕ್ಷಣ ಇಲಾಖೆಯು ಕರೀಗೌಡ ಬೀಚನಹಳ್ಳಿ ಅವರನ್ನು ಕುಲಸಚಿವರಾಗಿ ನೇಮಿಸಿತ್ತು. ಆದರೆ, ಕರೀಗೌಡ ಅವರನ್ನು ಕುಲಸಚಿವರಾಗಿ ನೇಮಿಸಿದಾಗ 60 ವರ್ಷ ವಯಸ್ಸಾಗಿತ್ತು. ಹೀಗಾಗಿ ಬೇವಿನಕಟ್ಟಿ ಅವರು ಅಧಿಕಾರ ಹಸ್ತಾಂತರಿಸಿರಲಿಲ್ಲ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಕರೀಗೌಡ ಅವರ ನೇಮಕವನ್ನು ಅಸಿಂಧುಗೊಳಿಸಿತ್ತು. ಈ ಹಿಂದೆ ಇಂತಹದ್ದೊಂದು ಘಟನೆ ನಡೆದಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಕುಲಸಚಿವರು ಯಾವುದೇ ಸ್ವಂತ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಅವರ ಹೆಸರಿನಲ್ಲಿ ಬೇರೆಯವರು ಆದೇಶ ಹೊರಡಿಸುತ್ತಾರೆ’ ಎಂದು ಇತ್ತೀಚೆಗೆ ಅಧ್ಯಾಪಕರು, ಬೋಧಕೇತರರು ಧರಣಿ ನಡೆಸಿದ ಸಂದರ್ಭದಲ್ಲಿ ನೇರ ಆರೋಪ ಮಾಡಿದ್ದರು.

‘ನಿಯಮದ ಪ್ರಕಾರ ಕುಲಸಚಿವರಿಗೆ ವಯಸ್ಸಾಗಿರುವುದರಿಂದ ಅವರು ಆ ಸ್ಥಾನದಲ್ಲಿ ಮುಂದುವರೆಯುವಂತಿಲ್ಲ. ಅವರು ಸಹಿ ಹಾಕುವುದಕ್ಕಷ್ಟೇ ಸೀಮಿತರಾಗಿದ್ದಾರೆ. ನೈತಿಕ ಜವಾಬ್ದಾರಿ ಹೊತ್ತು ಕುಲಸಚಿವರು ರಾಜೀನಾಮೆ ಕೊಟ್ಟು ಬರಬೇಕು’ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಆಗ್ರಹಿಸಿದ್ದಾರೆ.

‘ಕುಲಸಚಿವರು ಅಧಿಕಾರದಲ್ಲಿ ಮುಂದುವರೆದಿರುವುದು ಕಾನೂನುಬಾಹಿರ. ಹೀಗಿರುವಾಗ 17 ಬೋಧಕ ಹುದ್ದೆಗಳ ನೇಮಕಾತಿಗೆ ಮುಂದಾಗಿರುವುದು, ಎಲ್ಲ ರೀತಿಯ ಆದೇಶಗಳನ್ನು ಹೊರಡಿಸುತ್ತಿರುವುದು ಕೂಡ ನಿಯಮಬಾಹಿರ. ನಾಡಿನ ಸಾಕ್ಷಿಪ್ರಜ್ಞೆಯಂತಿರುವ ವಿಶ್ವವಿದ್ಯಾಲಯದಲ್ಲಿ ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ಸರ್ಕಾರ ಜಾಣ ಮೌನ ವಹಿಸಿರುವುದು ದುರಂತ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.