ADVERTISEMENT

ಹಂಪಿ ಸ್ಮಾರಕಗಳು ಈಗಲೂ ನೀರಲ್ಲೇ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 12:33 IST
Last Updated 12 ಆಗಸ್ಟ್ 2019, 12:33 IST
ಹಂಪಿಯ ರಾಮ–ಲಕ್ಷ್ಮಣ ದೇವಸ್ಥಾನ ಜಲಾವೃತವಾಗಿರುವುದು–ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಹಂಪಿಯ ರಾಮ–ಲಕ್ಷ್ಮಣ ದೇವಸ್ಥಾನ ಜಲಾವೃತವಾಗಿರುವುದು–ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳಿಂದ ನೀರು ಹರಿಸುವುದನ್ನು ಸೋಮವಾರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಗೊಳಿಸಿರುವ ಕಾರಣ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ.

ಆದರೆ, ಭಾನುವಾರ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿರುವ ಪುರಂದರ ಮಂಟಪ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ ಇನ್ನೂ ಅದೇ ಸ್ಥಿತಿಯಲ್ಲಿವೆ. ಎದುರು ಬಸವಣ್ಣ ಮಂಟಪದ ಪರಿಸರದಲ್ಲಿ ಸುಮಾರು ಮೂರು ಅಡಿಗಳವರೆಗೆ ನಿಂತಿದ್ದ ನೀರು ಈಗ ಒಂದು ಅಡಿಗೆ ಇಳಿದಿದೆ.

ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಈಗಲೂ ನೀರು ಹರಿಯುತ್ತಿದ್ದು, ಸಂಚಾರ ಕಡಿತಗೊಂಡಿದೆ. ಪ್ರವಾಸಿಗರು ಅಚ್ಯುತರಾಯ ದೇವಸ್ಥಾನದ ಮೂಲಕ ಸುಮಾರು 2 ಕಿ.ಮೀ. ಗೂ ದೂರ ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ನದಿ ಉಕ್ಕಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧ ಕಡೆಗಳಿಂದ ಸೋಮವಾರ ನೂರಾರು ಜನ ಹಂಪಿಗೆ ಬಂದಿದ್ದರು. ಭಾನುವಾರ ಜಲಾಶಯದಿಂದ ನದಿಗೆ ಮೂರು ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿತ್ತು. ಸೋಮವಾರ ಅದನ್ನು 2.12 ಲಕ್ಷ ಕ್ಯುಸೆಕ್‌ಗೆ ಇಳಿಸಲಾಗಿದೆ. ತಾಲ್ಲೂಕಿನ ಐದು ಗ್ರಾಮಗಳು ಮುಳುಗಡೆ ಭೀತಿಯಿಂದ ದೂರವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.