ADVERTISEMENT

ಹಂಪಿ ಉತ್ಸವ: ವಿರೋಧದ ನಡುವೆ ಉಪಸಮಿತಿ ರಚನೆ

ಮೂರು ದಿನ ‘ಹಂಪಿ ಉತ್ಸವ’ ಆಚರಿಸಲು ನಿರಾಕರಿಸಿದ ಜಿಲ್ಲಾಡಳಿತ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ನವೆಂಬರ್ 2020, 8:30 IST
Last Updated 8 ನವೆಂಬರ್ 2020, 8:30 IST
ಹಂಪಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ–ಸಂಗ್ರಹ ಚಿತ್ರ
ಹಂಪಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ–ಸಂಗ್ರಹ ಚಿತ್ರ   

ಹೊಸಪೇಟೆ: ಒಂದೇ ದಿನಕ್ಕೆ ಸೀಮಿತವಾಗಿ ‘ಹಂಪಿ ಉತ್ಸವ’ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದ್ದರೂ ಅದನ್ನು ಲೆಕ್ಕಿಸದೇ ಜಿಲ್ಲಾಡಳಿತ ಉತ್ಸವಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ.

ಉತ್ಸವಕ್ಕೆ ಆರು ದಿನಗಳಷ್ಟೇ ಉಳಿದಿದ್ದು, ಯಶಸ್ವಿಯಾಗಿ ಮುಗಿಸಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತವು ಐದು ಉಪಸಮಿತಿಗಳನ್ನು ರಚಿಸಿದೆ. ಆಹ್ವಾನ ಪತ್ರಿಕೆ ಮುದ್ರಿಸುವ ಹಾಗೂ ವಿತರಿಸುವ ಸಮಿತಿ, ಕಾನೂನು ಮತ್ತು ಸುವ್ಯವಸ್ಥೆ ಸಮಿತಿ, ಶೋಭಾಯಾತ್ರೆ ಹಾಗೂ ಪೂಜಾ ಸಮಿತಿ, ತುಂಗಾ ಆರತಿ ಮಹೋತ್ಸವ ಸಮಿತಿ ಹಾಗೂ ಮಾಧ್ಯಮ ಸಮಿತಿಗಳನ್ನು ರಚಿಸಿ ಹಂಪಿ ಉತ್ಸವ ಆಚರಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಆದೇಶ ಹೊರಡಿಸಿದ್ದಾರೆ.

ಐದು ಉಪಸಮಿತಿಗಳನ್ನು ರಚಿಸಿ, ಕೆಲಸದ ಜವಾಬ್ದಾರಿ ಹಂಚಿಕೆ ಮಾಡುವುದರ ಮೂಲಕ ಉತ್ಸವದ ಆಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಸ್ಪಷ್ಟ ಸಂದೇಶ ಜಿಲ್ಲಾಧಿಕಾರಿ ನೀಡಿದ್ದಾರೆ.

ADVERTISEMENT

ಆಹ್ವಾನ ಪತ್ರಿಕೆ ಮುದ್ರಿಸುವ ಮತ್ತು ವಿತರಿಸುವ ಸಮಿತಿಗೆ ಬಳ್ಳಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಸಿ. ಮಂಜುನಾಥ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಿತಿಗೆ ಹೊಸಪೇಟೆ ಡಿವೈಎಸ್ಪಿ ವಿ. ರಘುಕುಮಾರ, ಶೋಭಾಯಾತ್ರೆ ಹಾಗೂ ಪೂಜಾ ಸಮಿತಿ, ತುಂಗಾ ಆರತಿ ಮಹೋತ್ಸವ ಸಮಿತಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಳ್ಳಾರಿ ಸಹಾಯಕ ಆಯುಕ್ತ ಎಂ.ಎಚ್‌. ಪ್ರಕಾಶ ರಾವ್‌ ಮತ್ತು ಮಾಧ್ಯಮ ಸಮಿತಿಗೆ ಬಳ್ಳಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ ಅಧ್ಯಕ್ಷರಾಗಿದ್ದಾರೆ.

ಒಂದೇ ದಿನ ಏಕೆ:

ಕೋವಿಡ್‌–19 ಕಾರಣಕ್ಕಾಗಿ ಜಿಲ್ಲಾಡಳಿತವು ಈ ವರ್ಷ ಒಂದೇ ದಿನ ಸಾಂಕೇತಿಕವಾಗಿ ಉತ್ಸವ ಆಚರಿಸಲು ತೀರ್ಮಾನ ತೆಗೆದುಕೊಂಡಿದೆ. ಈಗಷ್ಟೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದು ನಿಯಂತ್ರಣಕ್ಕೆ ಬರುತ್ತಿದೆ. ಈ ವೇಳೆ ಹೆಚ್ಚಿನ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದರೆ ಸೋಂಕು ವ್ಯಾಪಕವಾಗಿ ಹರಡಬಹುದು ಎನ್ನುವುದು ಜಿಲ್ಲಾಡಳಿತದ ಸಮಜಾಯಿಷಿ.

ನ. 13ರಂದು ಸಂಜೆ 4ಕ್ಕೆ ಹಂಪಿ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇಗುಲದ ವರೆಗೆ ಶೋಭಾಯಾತ್ರೆ ನಡೆಯಲಿದೆ. ಬಳಿಕ ತುಂಗಭದ್ರಾ ನದಿ ತಟದಲ್ಲಿ ತುಂಗಾ ಆರತಿ ಮಹೋತ್ಸವದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ.

‘ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಹೆಚ್ಚಿನ ಜನರನ್ನು ಸೇರಿಸಿದರೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಂಕೇತಿಕವಾಗಿ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ವಿರೋಧವೇಕೇ?:

‘ಕೋವಿಡ್‌ ನಡುವೆಯೂ ಮೈಸೂರಿನಲ್ಲಿ ನಾಡಹಬ್ಬ ದಸರಾ ಸರಳವಾಗಿ ಆಚರಿಸಿದರೂ ಎಂದಿನಂತೆ ವೇದಿಕೆ ಕಾರ್ಯಕ್ರಮಗಳು ನಡೆದಿವೆ. ಅದೇ ರೀತಿ ಕಿತ್ತೂರು ಉತ್ಸವವನ್ನು ಆಚರಿಸಲಾಗಿದೆ. ಹೀಗಿರುವಾಗ ಹಂಪಿ ಉತ್ಸವವನ್ನು ಒಂದು ದಿನ ಹೆಸರಿಗಷ್ಟೇ ಆಚರಿಸುವುದು ಎಷ್ಟರಮಟ್ಟಿಗೆ ಸರಿ. ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನ ಕಾರ್ಯಕ್ರಮ ಸಂಘಟಿಸಬೇಕು’ ಎನ್ನುವುದು ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಇತರೆ ಸಂಘಟನೆಗಳ ಬೇಡಿಕೆಯಾಗಿದೆ. ಆದರೆ, ಜಿಲ್ಲಾಡಳಿತ ಅವರ ಮಾತಿಗೆ ಮನ್ನಣೆ ನೀಡದೇ ಇರುವುದು ವಿರೋಧಕ್ಕೆ ಕಾರಣವಾಗಿದೆ.

***

ಕೋವಿಡ್‌ ಕಾರಣಕ್ಕಾಗಿ ಹಂಪಿ ಉತ್ಸವ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಹೊರತು ಬೇರೇನೂ ಉದ್ದೇಶವಿಲ್ಲ. ಕಲಾವಿದರು ಅರ್ಥ ಮಾಡಿಕೊಂಡು ಸಹಕರಿಸಬೇಕು.
–ಎಸ್‌.ಎಸ್‌. ನಕುಲ್‌, ಅಧ್ಯಕ್ಷ, ಹಂಪಿ ಉತ್ಸವ ಆಚರಣಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.