ADVERTISEMENT

ಬಳ್ಳಾರಿ ಜಿಲ್ಲೆಯಾದ್ಯಂತ ಹೆದ್ದಾರಿ ಬಂದ್‌; ರೈತ ಮುಷ್ಕರಕ್ಕೆ ವ್ಯಾಪಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 8:33 IST
Last Updated 6 ಫೆಬ್ರುವರಿ 2021, 8:33 IST
ದೆಹಲಿಯಲ್ಲಿ ರೈತರ ಮುಷ್ಕರವನ್ನು ಬೆಂಬಲಿಸಿ ಕುರುಗೋಡು ತಾಲ್ಲೂಕಿನ ಕೋಳೂರು ಕ್ರಾಸ್‌ನಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬಳ್ಳಾರಿ–ಸಿಂಧನೂರು ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು.
ದೆಹಲಿಯಲ್ಲಿ ರೈತರ ಮುಷ್ಕರವನ್ನು ಬೆಂಬಲಿಸಿ ಕುರುಗೋಡು ತಾಲ್ಲೂಕಿನ ಕೋಳೂರು ಕ್ರಾಸ್‌ನಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬಳ್ಳಾರಿ–ಸಿಂಧನೂರು ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು.   

ಬಳ್ಳಾರಿ/ಹೊಸಪೇಟೆ/ಕೂಡ್ಲಿಗಿ/ಮರಿಯಮ್ಮನಹಳ್ಳಿ: ರೈತರ ಮುಷ್ಕರವನ್ನು ಬೆಂಬಲಿಸಿ ದೇಶದಾದ್ಯಂತ ಶನಿವಾರ ಹಮ್ಮಿಕೊಂಡಿದ್ದ ಹೆದ್ದಾರಿ ಬಂದ್‌ಗೆ ಜಿಲ್ಲೆಯ ವಿವಿಧೆಡೆ ರೈತರೂ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು, ಕಾರ್ಯಕರ್ತರು ಬೆಂಬಲ ಸೂಚಿಸಿದರು. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳನ್ನು ಬಂದ್‌ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೋಳೂರು ಕ್ರಾಸ್‌ ಬಳಿ ಬಳ್ಳಾರಿ–ಸಿಂಧನೂರು ಹೆದ್ದಾರಿ, ಹೊಸಪೇಟೆಯ ಅನಂತಶಯನ ಗುಡಿ ಸಮೀಪದ ರಾಜ್ಯ ಹೆದ್ದಾರಿ 25, ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4, ಡಣಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಹಾಗೂ ಕೂಡ್ಲಿಗಿಯ ಚಿತ್ರದುರ್ಗ–ವಿಜಯಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಪ್ರತಿಭಟನೆಗಳು ನಡೆದವು.

ಕೋಳೂರು ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘದ ಮುಖಂಡ ಆರ್‌.ಮಾಧವರೆಡ್ಡಿ, ‘ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಎರಡು ತಿಂಗಳಿಗೂ ಹೆಚ್ಚುಕಾಲದಿಂದ ರೈತರು ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ದೆಹಲಿಯ ಮುಷ್ಕರ ಇಡೀದೇಶದಲ್ಲಿ ಹಬ್ಬುತ್ತಿದೆ.ಇನ್ನಾದರೂ ಸರ್ಕಾರ ರೈತ ಪರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ರೈತರ ಬೇಡಿಕೆಗಳನ್ನು ಈಡೇರಿಸದೇ ಮುಷ್ಕರವನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರವನ್ನು ವಿರೋಧಿಸಿ ಹೆದ್ದಾರಿ ಬಂದ್‌ ಮಾಡುವ ಮೂಲಕ ಪ್ರತಿಭಟನೆ ದಾಖಲಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯಿತು.

ಸಂಘಟನೆಗಳ ಬೆಂಬಲ: ರೈತ ಮುಖಂಡರೊಂದಿಗೆ ಮುಷ್ಕರಕ್ಕೆ ಬೆಂಬಲ ನೀಡಿ ಎಐಕೆಎಂಎಸ್‌ಎಸ್‌, ಎಐಡಿಎಸ್‌ಓ, ಎಐಡಿವೈಓ, ಎಐಎಂಎಸ್‌ಎಸ್‌ ಸಂಘಟನೆಗಳ ಮುಖಂಡರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

‘ಜಿಲ್ಲೆಯಲ್ಲಿ ಹೆದ್ದಾರಿ ಬಂದ್‌ ಪ್ರತಿಭಟನೆಯು ಶಾಂತಿಯುತವಾಗಿ ನಡೆದಿದೆ. ಎಲ್ಲಿಯೂ ಅಹಿತಕರ ಘಟನೆಗಳು ವರದಿಯಾಗಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.