ADVERTISEMENT

ಹಂಪಿ ಜೂಗೆ ಬಂತು ನೀರಾನೆ- ಹುಲಿ, ಸಿಂಹ ವೀಕ್ಷಣೆಗೂ ವ್ಯವಸ್ಥೆ

ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ, ಸಿಂಹ ವೀಕ್ಷಣೆಗೂ ವ್ಯವಸ್ಥೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಸೆಪ್ಟೆಂಬರ್ 2022, 12:46 IST
Last Updated 20 ಸೆಪ್ಟೆಂಬರ್ 2022, 12:46 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ನೀರಾನೆ
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ನೀರಾನೆ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ (ಹಂಪಿ ಜೂ) ಈಗ ಮತ್ತೊಬ್ಬ ಹೊಸ ಅತಿಥಿ ಬಂದಿದ್ದಾರೆ. ಅವರ ಹೆಸರು ನೀರಾನೆ (ಹಿಪೊಪಾಟಮಸ್‌).

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಿಂದ ಈ ನೀರಾನೆ ಮೂರು ದಿನಗಳ ಹಿಂದೆ ಹಂಪಿ ಜೂಗೆ ಬಂದಿದೆ. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದ್ದು, ಸ್ವಚ್ಛಂದವಾಗಿ ವಿಹರಿಸುತ್ತಿದೆ. ಸದ್ಯ ಗಂಡು ನೀರಾನೆ ಬಂದಿದ್ದು, ಕೆಲವೇ ದಿನಗಳಲ್ಲಿ ಇನ್ನೊಂದು ಹೆಣ್ಣು ನೀರಾನೆ ಕೂಡ ತರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನೀರಾನೆಗಳನ್ನು ಇಡುವುದಕ್ಕಾಗಿಯೇ ಹಂಪಿ ಜೂ ಒಳಗಿನ ಕಿರು ಪ್ರಾಣಿ ಸಂಗ್ರಹಾಲಯದ ಬಳಿ ಅರ್ಧ ಎಕರೆ ಜಾಗ ಮೀಸಲಿಡಲಾಗಿದೆ. ಅವುಗಳನ್ನು ಇರಿಸಲು ಮನೆ, ನೀರಿನ ತೊಟ್ಟಿ ನಿರ್ಮಿಸಲಾಗಿದೆ. 4ರಿಂದ 5 ಅಡಿ ಎತ್ತರ ಹೊಂದಿರುವ ನೀರಾನೆ ಎರಡು ಟನ್‌ಗೂ ಅಧಿಕ ತೂಕ ಹೊಂದಿದೆ. ಶುದ್ಧ ಶಾಖಾಹಾರಿಯಾಗಿದ್ದು, ದಿನಕ್ಕೆ 30ರಿಂದ 35 ಕೆ.ಜಿ ತರಕಾರಿ, ಹಣ್ಣು ತಿನ್ನುತ್ತದೆ.

ADVERTISEMENT

ಆನೆ, ಘೇಂಡಾಮೃಗದ ನಂತರ ಅತಿ ಹೆಚ್ಚು ತೂಕ ಹೊಂದಿರುವ ಪ್ರಾಣಿ ಇದಾಗಿದೆ. ಹೆಸರಿಗೆ ತಕ್ಕಂತೆ ಹೆಚ್ಚು ಕಾಲ ನೀರಲ್ಲೇ ಇರಲು ಬಯಸುತ್ತದೆ. ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಈಗಾಗಲೇ ಚಿರತೆ, ಕರಡಿ, ನರಿ, ತೋಳ ಸೇರಿದಂತೆ ಇತರೆ ಪ್ರಾಣಿಗಳಿವೆ. ಈಗ ನೀರಾನೆ ಸೇರ್ಪಡೆಯಿಂದ ಅದರ ವ್ಯಾಪ್ತಿ ವಿಸ್ತರಿಸಿದೆ.

ಕಿರು ಸಂಗ್ರಹಾಲಯಕ್ಕೆ ಹುಲಿ, ಸಿಂಹ

ವಾಜಪೇಯಿ ಉದ್ಯಾನದಲ್ಲಿ ಹುಲಿ, ಸಿಂಹ ಸಫಾರಿಗೂ ಅವಕಾಶ ಇದೆ. ಸಫಾರಿಗೆ ಹೋದವರಷ್ಟೇ ಹುಲಿ, ಸಿಂಹ ನೋಡಬಹುದು. ಆದರೆ, ಈಗ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ, ಸಿಂಹಗಳನ್ನು ಇಡಲು ತೀರ್ಮಾನಿಸಲಾಗಿದೆ. ಈಗಾಗಲೇ ಹುಲಿ ಮನೆ ಆಗಿದ್ದು, ‘ಚಾಮುಂಡಿ’ ಹೆಸರಿನ ಹುಲಿಯನ್ನು ಅದರೊಳಗೆ ಇಡಲಾಗಿದೆ.

ಸಿಂಹಗಳನ್ನು ಇಡುವುದಕ್ಕಾಗಿಯೇ ಪ್ರತ್ಯೇಕ ಮನೆ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಉದ್ಯಾನದಲ್ಲಿ ಒಟ್ಟು ಐದು ಹುಲಿ, ಮೂರು ಸಿಂಹಗಳಿವೆ. ಹೀಗೆ ಒಂದೊಂದಾಗಿ ಹೊಸ ಹೊಸ ಪ್ರಾಣಿಗಳು ಕಿರು ಮೃಗಾಲಯಕ್ಕೆ ಬರುತ್ತಿರುವುದರಿಂದ ಸಹಜವಾಗಿಯೇ ಅವುಗಳನ್ನು ಕಣ್ತುಂಬಿಕೊಳ್ಳಲು ಬಯಸುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಉದ್ಯಾನದ ಆದಾಯವೂ ವೃದ್ಧಿಯಾಗುತ್ತಿದೆ.

‘ದ್ವೀಪ’ದಂತೆ ಕಂಗೊಳಿಸುತ್ತಿರುವ ಕೆರೆಗಳು

ಉದ್ಯಾನದೊಳಗೆ ಐದು ಕಿರು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಸಲ ಉತ್ತಮ ಮಳೆಯಾಗಿರುವುದರಿಂದ ಎಲ್ಲ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.

ಬೆಟ್ಟ ಗುಡ್ಡ, ಹಚ್ಚ ಹಸಿರಿನ ನಡುವೆ ಕೆರೆಗಳು ಇರುವುದರಿಂದ ಅವುಗಳೆಲ್ಲ ‘ದ್ವೀಪ’ಗಳಂತೆ ಭಾಸವಾಗುತ್ತಿವೆ. ಸಫಾರಿಗೆ ಹೋದವರ ಕಣ್ಮನ ಸೆಳೆಯುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಕಾರಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.