ADVERTISEMENT

ಗಣಿನಗರಿಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌, ಅನಗತ್ಯ ಹೊರಗೆ ತಿರುಗಾಡುವವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 7:03 IST
Last Updated 19 ಜುಲೈ 2020, 7:03 IST
ಸದಾ ಜನರಿಂದ ಗಿಜಿಗುಡುವ ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತದಲ್ಲಿ ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು
ಸದಾ ಜನರಿಂದ ಗಿಜಿಗುಡುವ ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತದಲ್ಲಿ ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು   
""

ಹೊಸಪೇಟೆ: ಕೊರೊನಾ ಲಾಕ್‌ಡೌನ್‌ಗೆ ಭಾನುವಾರ ನಗರ ಸಂಪೂರ್ಣ ಸ್ತಬ್ಧಗೊಂಡಿದೆ.

ಹೋದ ವಾರಕ್ಕಿಂತ ಈ ವಾರ ಪೊಲೀಸರು ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಲ್ಲ ಪ್ರಮುಖ ವೃತ್ತ, ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಿದ್ದಾರೆ. ಅನಗತ್ಯ ಹೊರಗೆ ಓಡಾಡುವವರಿಗೆ ಲಾಠಿ ಏಟು ಕೊಟ್ಟು ಕಳುಹಿಸುತ್ತಿದ್ದಾರೆ. ಕೆಲವೆಡೆ ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರದ ರೋಟರಿ ವೃತ್ತ, ರಾಮ ಟಾಕೀಸ್‌, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ವಾಲ್ಮೀಕಿ ವೃತ್ತ, ಸಾಯಿಬಾಬಾ ವೃತ್ತ, ಎ.ಪಿ.ಎಂ.ಸಿ. ವೃತ್ತ, ಟಿ.ಬಿ. ಡ್ಯಾಂ ವೃತ್ತದಲ್ಲಿ ಬಿಗಿ ಪಹರೆ ಹಾಕಲಾಗಿದೆ. ದ್ವಿಚಕ್ರ ವಾಹನ, ಜೀಪುಗಳಲ್ಲಿ ಮೇಲಿಂದ ಮೇಲೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಅನಗತ್ಯ ಹೊರಗೆ ಓಡಾಡದಂತೆ ಧ್ವನಿವರ್ಧಕಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ADVERTISEMENT

ಶನಿವಾರ ಸಂಜೆ ಏಳು ಗಂಟೆಗೆ ಬಾಗಿಲು ಮುಚ್ಚಿದ್ದ ಮಳಿಗೆಗಳು ಭಾನುವಾರ ಬೆಳಿಗ್ಗೆ ಬಾಗಿಲು ತೆರೆಯಲಿಲ್ಲ. ಸಾರಿಗೆ ಸಂಸ್ಥೆ ಬಸ್ಸುಗಳು, ಆಟೊ, ಮ್ಯಾಕ್ಸಿಕ್ಯಾಬ್‌ಗಳು ರಸ್ತೆಗೆ ಇಳಿಯಲಿಲ್ಲ. ಪ್ರಮುಖ ರಸ್ತೆಗಳೆಲ್ಲ ನಿರ್ಜನವಾಗಿದ್ದವು. ಆದರೆ, ಬೆಳಿಗ್ಗೆ ಎಂದಿನಂತೆ ದಿನಪತ್ರಿಕೆ, ಹಾಲು ಪೂರೈಕೆಯಾಯಿತು. ತುರ್ತು ಸೇವೆಗಳಾದ ಆಸ್ಪತ್ರೆ, ಕ್ಲಿನಿಕ್‌, ಔಷಧ ಮಳಿಗೆಗಳು, ಪೆಟ್ರೋಲ್‌ ಬಂಕ್‌ ಎಂದಿನಂತೆ ತೆರೆದಿದ್ದವು.
ಮಾಂಸ, ಮದ್ಯದಂಗಡಿಗಳು ಮುಚ್ಚಿದ್ದವು. ರಾಮ ಟಾಕೀಸ್‌ ಬಳಿ ಕೆಲವರು ಹಿಂಬಾಗಿಲು ತೆರೆದು ಮಾಂಸ ಮಾರಾಟ ಮಾಡುತ್ತಿದ್ದರು. ವಿಷಯ ಗೊತ್ತಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಚ್ಚರಿಕೆ ಕೊಟ್ಟು ಮುಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.