ADVERTISEMENT

ಹೊಸಪೇಟೆ: ನೂರರ ಶಾಲೆಗೆ ನೂರೆಂಟು ವಿಘ್ನ

ಕಿಡಿಗೇಡಿಗಳ ಕುಕೃತ್ಯಕ್ಕೆ ಬೇಸತ್ತಿರುವ ಶಾಸಕರ ಮಾದರಿ ಶಾಲೆ ಮಕ್ಕಳು, ಸಿಬ್ಬಂದಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಜನವರಿ 2021, 8:38 IST
Last Updated 20 ಜನವರಿ 2021, 8:38 IST
ಹೊಸಪೇಟೆಯ ಚಿತ್ತವಾಡ್ಗಿಯಲ್ಲಿನ ವಿನೋಬಾ ಭಾವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ಶೆಡ್‌ಗಳನ್ನು ನಿರ್ಮಿಸಿಕೊಂಡಿರುವುದು
ಹೊಸಪೇಟೆಯ ಚಿತ್ತವಾಡ್ಗಿಯಲ್ಲಿನ ವಿನೋಬಾ ಭಾವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ಶೆಡ್‌ಗಳನ್ನು ನಿರ್ಮಿಸಿಕೊಂಡಿರುವುದು   

ಹೊಸಪೇಟೆ: ನೂರರ ಹೊಸ್ತಿಲಲ್ಲಿರುವ ಇಲ್ಲಿನ ಚಿತ್ತವಾಡ್ಗಿ ವಿನೋಬಾ ಭಾವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂರೆಂಟು ವಿಘ್ನಗಳು ಕಾಡುತ್ತಿವೆ.

ಮಕ್ಕಳು, ಬೋಧಕರು ಇರುವವರೆಗೆ ಇದು ಶಾಲೆಯಾಗಿ ಇರುತ್ತದೆ. ಶಾಲೆ ಮುಚ್ಚಿದ ನಂತರ ಅಕ್ರಮ ತಾಣಗಳ ಅಡ್ಡೆಯಾಗಿ ಬದಲಾಗುತ್ತದೆ. ಸೂರ್ಯ ಮುಳುಗುತ್ತಿದ್ದಂತೆ ಇಲ್ಲೆಲ್ಲ ಜೂಜುಕೋರರು, ಕುಡುಕರು ಸೇರಿಕೊಳ್ಳುತ್ತಾರೆ. ತಡರಾತ್ರಿ ವರೆಗೆ ಜೂಜಾಟವಾಡುತ್ತ, ಮದ್ಯ ಸೇವನೆ ಮಾಡುತ್ತ ಹರಟುತ್ತಾರೆ.

ಇಷ್ಟೇ ಇದ್ದರೆ ಸುಮ್ಮನಿರಬಹುದು. ಆದರೆ, ಇವರು ಮಾಡುವ ದುಷ್ಕೃತ್ಯದಿಂದ ಮಕ್ಕಳು, ಸಿಬ್ಬಂದಿ ಶಾಲೆಗೆ ಬರಲು ಹಿಂಜರಿಯುತ್ತಾರೆ. ಅಷ್ಟರಮಟ್ಟಿಗೆ ಹೊಲಸು ಮಾಡಿ ಹೋಗಿರುತ್ತಾರೆ.

ADVERTISEMENT

ಮದ್ಯಪಾನ ಮಾಡಿ, ಬಾಟಲಿಗಳನ್ನು ತರಗತಿ ಕೋಣೆಯೊಳಗೆ ಒಡೆದು ಹೋಗುತ್ತಾರೆ. ಸಿಗರೇಟ್‌ ಸೇದಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಗುಡ್ಡೆ ಗುಡ್ಡೆಯಾಗಿ ಮಣ್ಣು ಎಸೆದು ಹೋಗುತ್ತಾರೆ. ಮುಖ್ಯಶಿಕ್ಷಕರು, ಅಡುಗೆ ಮನೆ, ತರಗತಿಯ ಕೊಠಡಿಯ ಮುಂದೆಯೇ ಮಲ ಮೂತ್ರ ವಿಸರ್ಜಿಸಿ ಹೋಗುತ್ತಾರೆ. ಕಿಟಕಿ, ಬಾಗಿಲು ಮುರಿದು ಹೋಗುತ್ತಾರೆ. ವಿದ್ಯುತ್‌ ದೀಪಗಳನ್ನು ಒಡೆದು ಹಾಳುಗೆಡವುತ್ತಾರೆ. ಇತ್ತೀಚಿನ ಕೆಲವು ತಿಂಗಳಿಂದ ವಾಮಾಚಾರವೂ ಮಾಡುತ್ತಿದ್ದಾರೆ. ಶಾಲೆಯ ಆವರಣದಲ್ಲಿನ ಮರಕ್ಕೆ ಬಾಟಲಿ, ಮೆಣಸಿನಕಾಯಿ, ನಿಂಬೆ ಕಾಯಿ ಕಟ್ಟಿ ಹೋಗುತ್ತಿದ್ದಾರೆ.

ಇನ್ನು ಶಾಲೆಯ ಗೋಡೆಗೆ ಹೊಂದಿಕೊಂಡಂತೆ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿರುವುದರಿಂದ ಕಿಟಕಿ ತೆರೆಯಲು ಆಗುವುದಿಲ್ಲ. ದಿನವಿಡೀ ತರಗತಿಯೊಳಗೆ ಕತ್ತಲು ಆವರಿಸಿಕೊಂಡಿರುತ್ತದೆ. ಗಾಳಿಯಾಡುವುದಿಲ್ಲ. ಇಂತಹದ್ದರಲ್ಲಿಯೇ ವಿದ್ಯಾರ್ಥಿಗಳು ಪಾಠ, ಪ್ರವಚನ ಕೇಳಬೇಕಾದ ಅನಿವಾರ್ಯತೆ ಇದೆ.

1924ರಲ್ಲಿ ಆರಂಭಗೊಂಡ ಈ ಶಾಲೆ ಇನ್ನೂ ಮೂರು ವರ್ಷಗಳಲ್ಲಿ ಶತಮಾನೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಒಂದರಿಂದ ಎಂಟನೇ ತರಗತಿ ವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತರಗತಿಗಳು ನಡೆಯುತ್ತವೆ. ಒಟ್ಟು 640 ವಿದ್ಯಾರ್ಥಿಗಳಿದ್ದಾರೆ. 16 ಬೋಧಕ, ನಾಲ್ವರು ಬೋಧಕೇತರ ಸಿಬ್ಬಂದಿ ಇದ್ದಾರೆ. ವಿಶಾಲವಾದ ಆಟದ ಮೈದಾನ, ಶೌಚಾಲಯ ಸೇರಿದಂತೆ ಉತ್ತಮವಾದ ತರಗತಿ ಕೊಠಡಿಗಳಿವೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶಾಲೆಯ ಸಾಧನೆ ಉತ್ತಮವಾಗಿದೆ. ಆದರೆ, ಶಾಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಮಕ್ಕಳು, ಸಿಬ್ಬಂದಿ ಬೇಸತ್ತು ಹೋಗಿದ್ದಾರೆ.

‘ಶಾಲೆ ನಡೆಯುವವರೆಗೆ ಎಲ್ಲ ಸರಿ ಇರುತ್ತದೆ. ಶಾಲೆ ಬಿಟ್ಟ ನಂತರ ಸುತ್ತಮುತ್ತಲಿನವರು ಗುಂಪು ಗುಂಪಾಗಿ ಬಂದು ಕೂರುತ್ತಾರೆ. ಕೂರುವುದಷ್ಟೇ ಅಲ್ಲ, ಮದ್ಯ ಸೇವಿಸುತ್ತಾರೆ. ಜೂಜಾಟ ಆಡುತ್ತಾರೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಮಣ್ಣು ಎಸೆದು ಹೋಗುತ್ತಾರೆ. ಮಾಂಸದೂಟ ಮಾಡಿ ಅದರ ತುಂಡುಗಳನ್ನು ಎಸೆದು ಹೋಗುತ್ತಾರೆ. ಸಾಲದಕ್ಕೆ ಹಾಜರಿ ಪುಸ್ತಕ ಸೇರಿದಂತೆ ಇತರೆ ದಾಖಲೆಗಳನ್ನು ಕೂಡ ಹಾಳುಗೆಡವಿ ಹೋಗುತ್ತಾರೆ’ ಎಂದು ಶಾಲೆಯ ಹಿರಿಯ ಶಿಕ್ಷಕಿ ಅಂಜನಮ್ಮ ತಿಳಿಸಿದರು.

‘ಇದು ಶಾಸಕರ ಮಾದರಿ ಶಾಲೆ. ಅದು ಮಾದರಿಯಾಗಿ ರೂಪುಗೊಳ್ಳಬೇಕು. ಆದರೆ, ಕಿಡಿಗೇಡಿಗಳಿಂದ ಶಾಲೆಗೆ ಕೆಟ್ಟ ಹೆಸರು. ಇತ್ತೀಚೆಗೆ ನಡೆದ ರಸ್ತೆ ವಿಸ್ತರಣೆಯಲ್ಲಿ ಶಾಲೆಯ ಒಂದು ಬದಿಯಲ್ಲಿ ಕಾಂಪೌಂಡ್‌ ಕೆಡವಲಾಗಿದೆ. ಅಕ್ರಮ ತಡೆಗೆ ಶಾಲೆಯ ಸುತ್ತಲೂ ಕಾಂಪೌಂಡ್‌ ನಿರ್ಮಾಣಕ್ಕೆ ₹40 ಲಕ್ಷ ಮಂಜೂರಾಗಿದೆ. ಬೇಗ ಕೆಲಸ ಆರಂಭಿಸಿ, ಎತ್ತರವಾಗಿ ಕಾಂಪೌಂಡ್‌ ನಿರ್ಮಿಸಬೇಕು. ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಿದರೆ ಅಕ್ರಮಕ್ಕೆ ಕಡಿವಾಣ ಹಾಕಬಹುದು’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎಂ. ಸಂತೋಷ್‌ ಕುಮಾರ್‌ ತಿಳಿಸಿದರು.

***

ಸಾರ್ವಜನಿಕರು ತಮ್ಮ ಆಸ್ತಿಯೆಂದು ಭಾವಿಸಿ ಶಾಲೆಯ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಆದರೆ, ಅವರೇ ಹೊಲಸು ಮಾಡುತ್ತಿದ್ದು, ಇದರ ವಿರುದ್ಧ ಪೊಲೀಸರಿಗೆ ದೂರು ಕೊಡಲಾಗುವುದು.

–ಸುನಂದಾ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.