ADVERTISEMENT

‘ಪ್ರಶ್ನಿಸುತ್ತೇನೆ, ಸಹಿಗಷ್ಟೇ ಸೀಮಿತವಾಗೊಲ್ಲ’: ಸಂಸದ ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 14:32 IST
Last Updated 18 ನವೆಂಬರ್ 2018, 14:32 IST
ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಂಸದ ವಿ.ಎಸ್‌. ಉಗ್ರಪ್ಪ ಮಾತನಾಡಿದರು. -ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಂಸದ ವಿ.ಎಸ್‌. ಉಗ್ರಪ್ಪ ಮಾತನಾಡಿದರು. -ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಸಂಸದನಾಗಿ ಇರುವಷ್ಟೂ ದಿನ ಸಂಸತ್ತಿನಲ್ಲಿ ಜಿಲ್ಲೆಯ ಜನರ ಸಮಸ್ಯೆಗಳ ಕುರಿತಂತೆ ಪ್ರಶ್ನಿಸುತ್ತೇನೆ. ಸಹಿ ಹಾಕಿ ಬರುವುದಕಷ್ಟೇ ಸೀಮಿತವಾಗುವುದಿಲ್ಲ. ಪ್ರಧಾನಿ ಮೋದಿಯಲ್ಲ, ಅವರಪ್ಪನಿಗೂ ಸಂಸತ್ತಿನಲ್ಲಿ ಪ್ರಶ್ನಿಸುತ್ತೇನೆ ’ ಎಂದು ಸಂಸದ ವಿ.ಎಸ್‌. ಉಗ್ರಪ್ಪ ಭರವಸೆ ನೀಡಿದರು.

ಕಮಲಾಪುರ ಹಾಗೂ ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನಾಲ್ಕೈದು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಜರುಗಲಿದೆ. ಸಂಸತ್ತಿನಲ್ಲಿ ನನಗೆ ಮಾತನಾಡಲು ಎಷ್ಟು ಸಮಯಾವಕಾಶ ಸಿಗುತ್ತದೆಯೋ ಗೊತ್ತಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಜಿಲ್ಲೆಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವೆ. ಮತದಾರರ ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ’ ಎಂದು ತಿಳಿಸಿದರು.

‘ಹೊಸಪೇಟೆ ಜಿಲ್ಲೆಯ ಮಧ್ಯಭಾಗದಲ್ಲಿ ಇರುವುದರಿಂದ ಇಲ್ಲಿ ಮನೆ, ಬಳ್ಳಾರಿಯಲ್ಲಿ ಕಚೇರಿ ತೆರೆದು ಜನರ ಸಮಸ್ಯೆಗಳನ್ನು ಆಲಿಸಲು ಚಿಂತಿಸುತ್ತಿದ್ದೇನೆ. ಬೆಳಿಗ್ಗೆ ಆರರಿಂದ ರಾತ್ರಿ ಹನ್ನೆರಡು ಗಂಟೆಯ ವರೆಗೆ ಜನ ನನಗೆ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಯಾವುದಾದರೂ ಸಭೆಯಲ್ಲಿ ಇದ್ದರೆ, ಮುಗಿದ ಬಳಿಕ ನಾನೇ ಹಿಂತಿರುಗಿ ಕರೆ ಮಾಡುತ್ತೇನೆ. ಜತೆಗೆ ವಾರದಲ್ಲಿ ಕನಿಷ್ಠ ಎರಡು ದಿನ ಹೊಸಪೇಟೆಯಲ್ಲಿ ಉಳಿದುಕೊಂಡು ಜನರ ಸಮಸ್ಯೆ ಆಲಿಸುತ್ತೇನೆ. ಬಳ್ಳಾರಿಯನ್ನು ಮಾದರಿ ಲೋಕಸಭೆ ಕ್ಷೇತ್ರ ಮಾಡಲು ಶಕ್ತಿಮೀರಿ ಶ್ರಮಿಸುವೆ’ ಎಂದು ಭರವಸೆ ನೀಡಿದರು.

ADVERTISEMENT

‘ಸಂಸತ್ತಿನ ಅಧಿವೇಶನದ ಕುರಿತು ಈಗಾಗಲೇ ಲೋಕಸಭೆಯ ಸ್ಪೀಕರ್‌ ಅವರ ಕಾರ್ಯದರ್ಶಿಯಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಈ ತಿಂಗಳಾಂತ್ಯದಲ್ಲಿ ಅಧಿವೇಶನ ನಡೆಯಬಹುದು. ನಂತರ ಮುಂದಿನ ವರ್ಷ ಬಜೆಟ್‌ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಆದರೆ, ಸಂವಿಧಾನದ 86ನೇ ಪರಿಚ್ಛೇದದ ಪ್ರಕಾರ, ಕಡ್ಡಾಯವಾಗಿ ಜನವರಿಯಲ್ಲಿ ಸಂಸತ್ತಿನ ಜಂಟಿ ಅಧಿವೇಶನ ಕರೆಯಬೇಕು. ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಅವರಿಗೆ ನಾನು ತಿಳಿಸಿದ್ದೇನೆ. ಈ ವಿಷಯವನ್ನು ಅವರು ಸ್ಪೀಕರ್‌ ಅವರಿಗೆ ತಿಳಿಸುತ್ತೇನೆ ಎಂದು ನೋಟ್‌ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.

ಶಾಸಕ ಆನಂದ್‌ ಸಿಂಗ್‌ ಮಾತನಾಡಿ, ‘ಕಾರ್ಯಕರ್ತರ ಕಠಿಣ ಪರಿಶ್ರಮ, ಒಗ್ಗಟ್ಟು ಹಾಗೂ ಸ್ಮಾರ್ಟ್‌ ಕೆಲಸದಿಂದ ಉಪಚುನಾವಣೆಯಲ್ಲಿ ಉಗ್ರಪ್ಪನವರು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ. ಇದೇ ಹುಮ್ಮಸ್ಸು ಸಾರ್ವತ್ರಿಕ ಚುನಾವಣೆಯಲ್ಲೂ ತೋರಿಸಬೇಕು. ಕೇಂದ್ರ ಸರ್ಕಾರದ ಹಗರಣಗಳನ್ನು ಜನರಿಗೆ ತಿಳಿಸಬೇಕು’ ಎಂದರು.

‘ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ (ಟಿ.ಎಸ್‌.ಪಿ.) ಕಾರ್ಖಾನೆಯ ಕಾರ್ಮಿಕರಿಗೆ ನ್ಯಾಯ ಸಿಗಬೇಕು. ಕಾರ್ಖಾನೆ ಮುಚ್ಚಿರುವ ಜಾಗವನ್ನು ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ಪಡೆಯಬೇಕು. ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಆರಂಭಿಸಿ, ರೈತರಿಗೆ ಶಕ್ತಿ ತುಂಬಲು ಉಗ್ರಪ್ಪನವರು ಶ್ರಮಿಸಬೇಕು’ ಎಂದು ಹೇಳಿದರು.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ, ನಗರಸಭೆ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅಮಾಜಿ ಹೇಮಣ್ಣ, ಟಿಂಕರ್‌ ರಫೀಕ್‌, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಆರ್‌. ಮಳಲಿ, ಮುಖಂಡರಾದ ಅಬ್ದುಲ್‌ ವಹಾಬ್‌, ಎಲ್‌. ಸಿದ್ದನಗೌಡ, ಮೊಹಮ್ಮದ್‌ ಇಮಾಮ್‌ ನಿಯಾಜಿ, ಕವಿತಾ ಈಶ್ವರ್‌ ಸಿಂಗ್‌, ಗುಜ್ಜಲ್‌ ರಘು, ಗುಜ್ಜಲ್‌ ನಾಗರಾಜ, ಮಾಬು ಸಾಬ್‌, ಪಾಲಪ್ಪ, ನಿಂಬಗಲ್‌ ರಾಮಕೃಷ್ಣ, ತಾರಿಹಳ್ಳಿ ವೆಂಕಟೇಶ ಮಧುರಚೆನ್ನ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.