ADVERTISEMENT

ಅಕ್ರಮ ಗಣಿಗಾರಿಕೆ: ನಷ್ಟ ₹1,552 ಕೋಟಿ, ವಸೂಲಿ ₹12 ಕೋಟಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:10 IST
Last Updated 17 ಆಗಸ್ಟ್ 2025, 6:10 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಬಳ್ಳಾರಿ: ಬಳ್ಳಾರಿಯೂ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಒಟ್ಟು ₹1,552 ಕೋಟಿ ನಷ್ಟವಾಗಿದೆ. ಇದರಲ್ಲಿ ಈವರೆಗೆ ₹12.11 ಕೋಟಿ ಮಾತ್ರ ವಸೂಲಾಗಿದೆ.

ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಅದರಿಂದ ಆಗಿರುವ ನಷ್ಟ ಮತ್ತು ನಷ್ಟ ವಸೂಲಿಯ ಬಗ್ಗೆ  ವಿಧಾನ ಪರಿಷತ್‌ ಸದಸ್ಯೆ, ನಟಿ ಉಮಾಶ್ರೀ ಅವರು ಆಗಸ್ಟ್ 12ರಂದು ಪರಿಷತ್‌ನಲ್ಲಿ ಚುಕ್ಕಿ ರಹಿತ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ ಅವರು ಲಿಖಿತ ಉತ್ತರ ನೀಡಿದ್ದಾರೆ. 

ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದಲ್ಲಿ ದಾಖಲಾಗಿ, ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಲಾದ 62 ಪ್ರಕರಣಗಳಲ್ಲಿ ₹615 ಕೋಟಿ ನಷ್ಟವಾಗಿದೆ. ಪ್ರಾಥಮಿಕ ವಿಚಾರಣೆ ನಡೆಯುತ್ತಿರುವ 42 ಪ್ರಕರಣಗಳಲ್ಲಿ ₹937 ಕೋಟಿ ನಷ್ಟವಾಗಿದೆ. ಇದೆಲ್ಲದರ ಒಟ್ಟು ಮೌಲ್ಯ ₹1,552 ಕೋಟಿ. 

ADVERTISEMENT

ಈ ಎಲ್ಲದರ ಪೈಕಿ, 5 ಪಕರಣಗಳಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಪಡೆದು, ಕ್ರಿಮಿನಲ್ ಕಾನೂನು (ತಿದ್ದುಪಡಿ) ಅಧ್ಯಾದೇಶ, 1944ರ ಅಡಿಯಲ್ಲಿ ಆಸ್ತಿ ಮುಟ್ಟುಗೋಲು ಮಾಡಲು ನ್ಯಾಯಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ನ್ಯಾಯಾಲಯವು ಒಂದು ಪ್ರಕರಣದಲ್ಲಿ ₹12.11 ಕೋಟಿ  ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಂತಿಮ ಆದೇಶ ಹೊರಡಿಸಿದೆ. 

ರಾಜ್ಯದ ಅಗಾಧ ಸಂಪತ್ತು ಲೂಟಿಯಾದ ಪ್ರಕರಣಗಳ ಕುರಿತು ಕರ್ನಾಟಕ ಲೋಕಾಯುಕ್ತ, ವಿಶೇಷ ತನಿಖಾ ತಂಡದಲ್ಲಿ ಈವರೆಗೆ ಒಟ್ಟು 110 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 94 ಪ್ರಕರಣಗಳಲ್ಲಿ ಅಂತಿಮ ವರದಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇನ್ನು 16 ಪ್ರಕರಣಗಳು ತನಿಖಾ ಹಂತದಲ್ಲಿವೆ. ಒಂದು ಪ್ರಕರಣ (ಪ್ರಕರಣ ಸಂಖ್ಯೆ 20/2015)ದಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗಿದೆ.

ಸಿಬಿಐ ಸಂಸ್ಥೆಯು ಪ್ರಾಥಮಿಕ ತನಿಖೆ ನಡೆಸಿ ಮುಕ್ತಾಯಗೊಳಿಸಿರುವ ಪ್ರಕರಣಗಳು ಹಾಗೂ ಪ್ರಾಥಮಿಕ ತನಿಖೆ ನಡೆಸಿ, ರಿಜಿಸ್ಟರ್ ಕೇಸ್‌ಗಳಾಗಿ ಪರಿವರ್ತಿಸಲು ವಿಫಲವಾಗಿ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿರುವ ಪಕರಣಗಳನ್ನು ಸರ್ಕಾರ (ಆದೇಶ ಸಂಖ್ಯೆ:ಸಿಐ 282ಎಂಎಂಎಂ 2013) 2018ರ ಮಾರ್ಚ್‌ 21ರಂದು ಲೋಕಾಯುಕ್ತದ ವಿಶೇಷ ತನಿಖಾ ತಂಡಕ್ಕೆ ವಹಿಸಿರುತ್ತದೆ. ಬಳಿಕ ಸರ್ಕಾರವು (ಆದೇಶ ಸಂಖ್ಯೆ ಸಿಐ 18 ಎಂಎಂಎಂ 2019) 2024ರ ನ.11ರಂದು 10 ‘ಸಿ’ ವರ್ಗದ ಗಣಿ ಗುತ್ತಿಗೆಗಳ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದೆ. ಈ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. 

2008ಕ್ಕೂ ಪೂರ್ವದಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯಲ್ಲಿ ವ್ಯಾಪಕವಾದ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದ್ದವು. ಇದರ ತನಿಖೆ ನಡೆಸಿದ್ದ ಲೋಕಾಯುಕ್ತ ಎರಡು ಭಾಗಗಳಲ್ಲಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.  

‘ಸಿ’ ಕ್ಯಾಟಗರಿಯ ಮಾಲೀಕರೊಬ್ಬರು ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದಾರೆ. ಅವರಿಂದಲೇ ವಸೂಲಿ ಆರಂಭವಾಗಬೇಕು. ಸಿದ್ದರಾಮಯ್ಯ ಅವರ ಪಾದಯಾತ್ರೆ ಉದ್ದೇಶ ಏನು? ಈಗ ಆಗಿರುವುದು ಏನು?   –
ಶ್ರೀಶೈಲ ಆಲದಹಳ್ಳಿ, ಉಪಾಧ್ಯಕ್ಷ ಜನಸಂಗ್ರಾಮ ಪರಿಷತ್‌ ರಾಜ್ಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.