ADVERTISEMENT

ಸಂತ್ರಸ್ತರ ಜತೆ ಚರ್ಚಿಸದೆ ತೀರ್ಮಾನ, ಕ್ರಿಯಾಯೋಜನೆ ಅವೈಜ್ಞಾನಿಕ: ಹಿರೇಮಠ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 14:23 IST
Last Updated 29 ಆಗಸ್ಟ್ 2021, 14:23 IST
   

ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ನಲುಗಿ ಹೋಗಿರುವ ಅವಿಭಜಿತ ಬಳ್ಳಾರಿ ಜಿಲ್ಲೆಯ ಪರಿಸರ ಪುನರ್‌ನಿರ್ಮಾಣಕ್ಕೆ ಜಿಲ್ಲಾಡಳಿತ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯು ಅವೈಜ್ಞಾನಿಕವಾಗಿದ್ದು, ಗಣಿ ಬಾಧಿತ ಪ್ರದೇಶದ ಸಂತ್ರಸ್ತರ ಜತೆಗೆ ಚರ್ಚಿಸಿಯೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್‌) ಒತ್ತಾಯಿಸಿದೆ.

ಜಿಲ್ಲೆಯ ಪರಿಸರ ಪುನರ್‌ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹಾಗೂ ಸಿಇಸಿ (ಸೆಂಟ್ರಲ್‌ ಎಂಪವರ್ಡ್‌ ಕಮಿಟಿ) ಅನೇಕ ಮಾರ್ಗಸೂಚಿ ನೀಡಿದ್ದಾಗ್ಯೂ ಅವೈಜ್ಞಾನಿಕವಾದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಕೆಎಂಇಆರ್‌ಸಿ 2016ರಲ್ಲಿ ಸಿದ್ಧಪಡಿಸಿದ್ದ ಕ್ರಿಯಾ ಯೋಜನೆಯನ್ನು ಕೋರ್ಟ್‌ ತಿರಸ್ಕರಿಸಿದೆ. 2018ರಲ್ಲಿ ಆಗಿನ ಜಿಲ್ಲಾಡಳಿತ ಸಿದ್ಧಪಡಿಸಿರುವ ಯೋಜನೆಯೂ ಜನರ ಬದುಕು– ಭವಿಷ್ಯವನ್ನು ಕಡೆಗಣಿಸಿದೆ ಎಂದು ಎಸ್‌ಪಿಎಸ್‌ ಮುಖ್ಯಸ್ಥ ಎಸ್.ಆರ್. ಹಿರೇಮಠಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ರಾಜ್ಯ ಸರ್ಕಾರ ಸಿದ್ಧಪಡಿಸಿದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬಳ್ಳಾರಿ ಜಿಲ್ಲೆ 26ನೇ ಸ್ಥಾನದಲ್ಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸಮಸ್ಯೆಗಳಿಂದಾಗಿ ಜಿಲ್ಲೆ ಹಿಂದುಳಿದಿದೆ ಎಂದು ಬೆರಳು ಮಾಡಿದೆ. ಸಾಕ್ಷರತೆಯಲ್ಲಿ 25ನೇ ಸ್ಥಾನದಲ್ಲಿದೆ. 2019–20 ನೇ ಸಾಲಿನಲ್ಲಿ ಶೇ 47.8ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲಿದ್ದಾರೆ. ಶೇ 67.8ರಷ್ಟು ಮಕ್ಕಳು, ಶೇ 67.5ರಷ್ಟು 15ರಿಂದ 49ವರ್ಷದ ಮಹಿಳೆಯರು ರಕ್ತಹೀನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಿವೃತ್ತ ಪ್ರೊ. ಸಿ.ಆರ್‌. ಚಂದ್ರಶೇಖರ್‌ ವಿವರಿಸಿದರು.

ADVERTISEMENT

ವಿಶೇಷ ಉದ್ದೇಶದ ಕಾರ್ಯಯೋಜನೆಗೆ (ಎಸ್‌ಪಿವಿ) ಇದುವರೆಗೆ ಸಂಗ್ರಹಿಸಿರುವ ಹಣ ₹ 17 ಸಾವಿರ ಕೋಟಿ ಇದೆ. ಇದರಲ್ಲಿ ಶೇ 12ರಷ್ಟನ್ನು ಮಾತ್ರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಕಟ್ಟಡ, ರಸ್ತೆ, ಯಂತ್ರೋಪಕರಣ ಇತ್ಯಾದಿಗೆ ಶೇ 40ಕ್ಕಿಂತ ಅಧಿಕ ಹಣ ನಿಗದಿಪಡಿಸಲಾಗಿದೆ. ಅನುದಾನ ದುರುಪಯೋಗ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹಿರೇಮಠ ಹಾಗೂ ಚಂದ್ರಶೇಖರ್‌ ಆರೋಪಿಸಿದರು.

ಗಣಿ ಬಾಧಿತ ಪ್ರದೇಶಗಳ ಜನರ ಜತೆ ಚರ್ಚಿಸಿಯೇ ಗ್ರಾಮ ಮಟ್ಟದಲ್ಲಿ ಪರಿಸರ ಪುನರ್‌ ನಿರ್ಮಾಣ ಯೋಜನೆ ರೂಪಿಸಬೇಕು. ಈ ಯೋಜನೆ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಮೇಲ್ವಿಚಾರಣೆ ಸಮಿತಿ ರಚಿಸಬೇಕು. ಅದಿರು ರಫ್ತು ನಿಷೇಧಿಸಿ, ಸ್ಥಳೀಯವಾಗಿಯೇ ಬಳಸಬೇಕು ಎಂದು ಅವರು ಆಗ್ರಹಿಸಿದರು.

ಅಕ್ರಮ ಗಣಿಗಾರಿಕೆಯಿಂದ ₹ 1.20 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ರಚಿಸಲಾಗಿದ್ದ ಎಚ್‌.ಕೆ. ಪಾಟೀಲರ ನೇತೃತ್ವದ ಸಂಪುಟ ಉಪ ಸಮಿತಿ ವರದಿ ನೀಡಿದೆ. ಈ ಹಣವನ್ನು ಗಣಿ ಗುತ್ತಿಗೆದಾರರಿಂದ ವಸೂಲು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ದೇಶದ ಜನರ ಸಮಸ್ಯೆ ಕಡೆಗಣಿಸಿ, ಕೆಲವೇ ಉದ್ಯಮಿಗಳ ಹಿತಾಸಕ್ತಿ ರಕ್ಷಣೆಗಾಗಿ ಕೆಲಸ ಮಾಡುತ್ತಿರುವುದರ ವಿರುದ್ಧ ಹೋರಾಟ ರೂಪಿಸಲು ಸೆಪ್ಟೆಂಬರ್‌ 18ರಂದು ನವದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ’ಸಿಟಿಜನ್ ಫಾರ್‌ ಡೆಮಾಕ್ರಸಿ’ ಸಭೆ ನಡೆಯಲಿದೆ ಎಂದು ಹಿರೇಮಠ ಹೇಳಿದರು.

ದೇಶವನ್ನು ಭ್ರಷ್ಟ ರಾಜಕಾರಣಿಗಳಿಂದ ಬಿಡುಗಡೆಗೊಳಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ‘ಭ್ರಷ್ಟ ರಾಜಕಾರಣಿಗಳೇ ಅಧಿಕಾರ ಬಿಟ್ಟು ತೊಲಗಿ’ ಎಂಬ ಹೋರಾಟ ರೂಪಿಸಬೇಕಿದೆ. ನಿಜವಾದ ಅರ್ಥದಲ್ಲಿ ಇದೊಂದು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಆಗಬೇಕಿದೆ. ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಹೊಸಪೇಟೆ ಹಾಗೂ ಸಂಡೂರಿನಲ್ಲಿ ಎಸ್‌ಪಿವಿ ಅನುದಾನ ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಆ.30 ಹಾಗೂ ಆ. 31ರಂದು ಕಾರ್ಯಾಗಾರ ನಡೆಸಲಾಗುತ್ತಿದೆ ಎಂದೂ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.