
ಹೂವಿನಹಡಗಲಿ: ತುಂಗಭದ್ರಾ ನದಿ ನೀರಿನ ಮಟ್ಟ ಇಳಿಮುಖವಾಗುತ್ತಿದ್ದಂತೆ ಮರಳು ಅಕ್ರಮ ದಂಧೆ ಶುರುವಾಗಿದೆ. ಹಾವೇರಿ ಭಾಗದ ಮರಳು ದಂಧೆಕೋರರು ಬಲದಂಡೆ ಹೂವಿನಹಡಗಲಿ ತಾಲ್ಲೂಕಿನ ನದಿ ತೀರದ ಮರಳನ್ನು ತೆಪ್ಪಗಳ ಮೂಲಕ ದೋಚುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲ್ಲೂಕಿನ ಹಿರೇಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ ಗ್ರಾಮಗಳ ಬಳಿಯ ನದಿ ತೀರದಲ್ಲಿ ಮರಳು ತೆಪ್ಪಗಳ ಭರಾಟೆ ಜೋರಾಗಿದೆ. ಈ ಕಡೆ ದಂಡೆಯಲ್ಲಿ ಲಭ್ಯವಿರುವ ಗುಣಮಟ್ಟದ ಮರಳನ್ನು ತೆಪ್ಪಗಳಲ್ಲಿ ತುಂಬಿ ಆ ಕಡೆಯ ಗಳಗನಾಥ, ಮೇವುಂಡಿ, ತೇರದಹಳ್ಳಿಯ ದಡಕ್ಕೆ ಸಾಗಿಸಲಾಗುತ್ತಿದೆ.
ಎಡ ದಂಡೆಯಲ್ಲಿ ಆಳವಾದ ಗುಂಡಿಗಳಿರುವುದರಿಂದ ಸುಲಭವಾಗಿ ಮರಳು ತೆಗೆಯಲು ಸಾಧ್ಯವಿಲ್ಲ. ಹಾಗಾಗಿ ಆ ಭಾಗದ ದಂಧೆಕೋರರು ಹೂವಿನಹಡಗಲಿ ತಾಲ್ಲೂಕು ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎದು ದೂರಿದ್ದಾರೆ.
‘ಈ ಭಾಗದ ಮರಳನ್ನು ಪ್ರತಿದಿನ 50-60 ತೆಪ್ಪಗಳಲ್ಲಿ ತುಂಬಿಸಿ ಆ ಭಾಗಕ್ಕೆ ನಿರಂತರ ಸಾಗಣೆ ಮಾಡಲಾಗುತ್ತಿದೆ. ಬೆಳಗಿನ ಜಾವದಿಂದ ಶುರುವಾಗುವ ಈ ದಂಧೆ ಸಂಜೆಯವರೆಗೂ ನಡೆಯುತ್ತದೆ. ಬೆಳದಿಂಗಳು ಇದ್ದಲ್ಲಿ ರಾತ್ರಿಯೂ ತೆಪ್ಪಗಳು ಓಡಾಡುತ್ತವೆ’ ಎಂದು ಹಿರೇಬನ್ನಿಮಟ್ಟಿ ಗ್ರಾಮಸ್ಥರು ತಿಳಿಸಿದ್ದಾರೆ.
ಹಿರೇಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ ಗ್ರಾಮದ ನದಿ ತೀರದಲ್ಲಿ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ನಿರಂತರ ದಾಳಿ ನಡುವೆಯೂ ದಂಧೆ ನಿಯಂತ್ರಣಕ್ಕೆ ಬರುತ್ತಿಲ್ಲ.
ತಾಲ್ಲೂಕಿನ ಮರಳು ಬ್ಲಾಕ್ ಗಳಿಗೆ ಕಳೆದ ಮೂರು ವರ್ಷಗಳಿಂದ ಟೆಂಡರ್ ಆಗದೇ ಇರುವುದರಿಂದ ಕಟ್ಟಡ, ನಿರ್ಮಾಣ ಕೆಲಸಗಳಿಗೆ ಮರಳು ಅಭಾವ ಉಂಟಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ಅಕ್ರಮ ಮಾರ್ಗ ಮೂಲಕ ಮರಳು ದೋಚಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ಹಾವೇರಿ-ಹೂವಿನಹಡಗಲಿ ಭಾಗಗಳಿಂದ ಏಕಕಾಲಕ್ಕೆ ಜಂಟಿ ದಾಳಿ ನಡೆಸಿ ತೆಪ್ಪಗಳ ಸಾಗಾಟಕ್ಕೆ ಕಡಿವಾಣ ಹಾಕಬೇಕು. ಮರಳು ಬ್ಲಾಕ್ ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಸರ್ಕಾರಿ ದರದಲ್ಲಿ ಮರಳು ಪೂರೈಕೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೂವಿನಹಡಗಲಿ ಭಾಗದಲ್ಲಿ ಅಕ್ರಮಕ್ಕೆ ಬ್ರೇಕ್ ಹಾಕಿದ್ದೇವೆ. ತೆಪ್ಪಗಳ ಸಾಗಣೆ ತಡೆಯಲು ಎಡ-ಬಲ ದಂಡೆಗಳಲ್ಲಿ ಜಂಟಿ ಕಾರ್ಯಾಚರಣೆಗೆ ಯೋಜಿಸಿದ್ದೇವೆಕೀರ್ತಿಕುಮಾರ್, ಜಿಲ್ಲಾ ಜಾಗೃತ ದಳ ಅಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.