
ಬಳ್ಳಾರಿ: ರಾಜ್ಯದ ಬಹುತೇಕ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಟ್ರಸ್ಟ್‌ಗಳು ಹಲವು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್ ಮತ್ತು ಲೆಕ್ಕ ಪರಿಶೋಧನಾ ವರದಿ ಸಲ್ಲಿಸಲು ವಿಫಲವಾಗಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ.
ರಾಜ್ಯದ 30 ಡಿಎಂಎಫ್‌ಗಳ ಪೈಕಿ ನಾಲ್ಕು ಮಾತ್ರ 2023–24ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿವೆ. ಉಳಿದ ಡಿಎಂಎಫ್‌ಗಳು ಸಲ್ಲಿಸಿಲ್ಲ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕಳೆದ ಏಪ್ರಿಲ್‌ನಲ್ಲಿ ಆದಾಯ ತೆರಿಗೆ ಇಲಾಖೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
ಗಣಿ ಬಾಧಿತ ಪ್ರದೇಶಗಳು, ಜನರ ಕಲ್ಯಾಣಕ್ಕೆ 2015ರ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ತಿದ್ದುಪಡಿ ತಂದು ಡಿಎಂಎಫ್‌ಗಳನ್ನು ದೇಶದಾದ್ಯಂತ ಸ್ಥಾಪಿಸಲಾಗಿದೆ. ರಾಜ್ಯದಲ್ಲೂ 30 ಡಿಎಂಎಫ್‌ಗಳು ಇವೆ. ಗಣಿ ಕಂಪನಿಗಳಿಂದ ರಾಯಧನ ಸಂಗ್ರಹಿಸುವ ಡಿಎಂಎಫ್ ಅದನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ, ಆರೋಗ್ಯ ಮತ್ತು ಪರಿಸರ ಯೋಜನೆಗಳಿಗೆ ವಿನಿಯೋಗಿಸುತ್ತದೆ. ರಾಜ್ಯದ ಎಲ್ಲ ಡಿಎಂಎಫ್‌ಗಳಲ್ಲಿ ₹4828.34 ಸಂಗ್ರಹವಾಗಿದೆ. ಒಟ್ಟು 12,643 ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, 5,393 ಯೋಜನೆಗಳು ಪೂರ್ಣಗೊಂಡಿವೆ. ಇದಕ್ಕಾಗಿ ₹1229.29 ಕೋಟಿ ಖರ್ಚಾಗಿದೆ. ಹೀಗಾಗಿ ಡಿಎಂಎಫ್‌ಗಳ ಹಣಕಾಸಿನ ಪಾರದರ್ಶಕತೆ ಕೊರತೆಯು ಕಳವಳ ಮೂಡಿಸಿದೆ. ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನವೊಂದರಲ್ಲೇ ₹2623.82 ಹಣ ಸಂಗ್ರಹ ಆಗಿದೆ.
ಕೇಂದ್ರ ಸರ್ಕಾರ 2020ರ ಸೆ. 10 ಮತ್ತು 2021ರ ಸೆ. 10ರಂದು ಹೊರಡಿಸಿದ ಆದೇಶಗಳಲ್ಲಿ ಡಿಎಂಎಫ್‌ಗಳಿಗೆ ಆದಾಯ ತೆರಿಗೆ ವಿನಾಯಿತಿ ಒದಗಿಸಲಾಗಿದೆ. ಅದಕ್ಕೆ ವಾರ್ಷಿಕ ರಿಟರ್ನ್ಸ್ ಮತ್ತು ಲೆಕ್ಕಪರಿಶೋಧನೆ ವರದಿ ಸಲ್ಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.
‘ಈ ಡಿಎಂಎಫ್‌ಗಳು ಲೆಕ್ಕಪರಿಶೋಧನೆ ವರದಿಯೊಂದಿಗೆ ಆದಾಯದ ರಿಟರ್ನ್ಸ್ ಸಲ್ಲಿಸುವಲ್ಲಿ ವಿಫಲವಾದರೆ ಅದು ಮಾರ್ಗಸೂಚಿಗಳ ಉಲ್ಲಂಘನೆಯಾಗಲಿದೆ. ಎಲ್ಲಾ ಡಿಎಂಎಫ್‌ಗಳು ಬಾಕಿ ಇರುವ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ತಕ್ಷಣ ಸಲ್ಲಿಸಬೇಕು. ಈ ವರ್ಷದ ರಿಟರ್ನ್ಸ್‌ಗಳನ್ನೂ ಸಕಾಲದಲ್ಲಿ ಸಲ್ಲಿಸಬೇಕು’ ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಲಾಗಿದೆ.
ಡಿಎಂಎಫ್‌ಗಳಿಗೆ ಪತ್ರ: ಆದಾಯ ತೆರಿಗೆ ಇಲಾಖೆ ಪತ್ರ ಆಧರಿಸಿ ವಾಣಿಜ್ಯ ಮತ್ತು ಕೈಗಾರಿಕಾ (ಎಂಎಸ್‌ಎಂಇ ಮತ್ತು ಗಣಿ) ಇಲಾಖೆಯ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಏಪ್ರಿಲ್‌ನಲ್ಲೇ ಈ ಬಗ್ಗೆ ಪತ್ರ ಬರೆದಿದ್ದರು. ಇದೇ ಪತ್ರ ಆಧರಿಸಿ ನಿರ್ದೇಶಕರು ಡಿಎಂಎಫ್‌ಗಳಿಗೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಕಾಲದಲ್ಲಿ ರಿಟರ್ನ್ಸ್ ಸಲ್ಲಿಸುವಂತೆ ತಿಳಿಸಿದ್ದರು. ಆದರೂ ಬಹುತೇಕ ಡಿಎಂಎಫ್‌ಗಳು ರಿಟರ್ನ್ಸ್ ಸಲ್ಲಿಸದೇ ಇರುವುದು ಗೊತ್ತಾಗಿದೆ.
2024ರ ಮಾರ್ಗಸೂಚಿಯೂ ಮೂಲೆಗೆ: ಡಿಎಂಎಫ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2024ರಲ್ಲಿ ಹೊಸ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದೆ. ಇದನ್ನು ರಾಜ್ಯ ಸರ್ಕಾರ ಈ ವರೆಗೆ ಅಂಗೀಕರಿಸಿಲ್ಲ. ಬದಲಾವಣೆ ಮಾಡಿ ಕೇಂದ್ರಕ್ಕೆ ಶಿಫಾರಸ್ಸನ್ನೂ ಮಾಡಿಲ್ಲ. ಹೀಗಾಗಿ ಡಿಎಂಎಫ್‌ಗಳಲ್ಲಿ ಕ್ರಿಯಾ ಯೋಜನೆಗಳು ಸಿದ್ಧವಾಗಿಲ್ಲ. ಬಳ್ಳಾರಿಯೊಂದರಲ್ಲೇ ಕ್ರಿಯಾ ಯೋಜನೆ ಸಿದ್ಧವಾಗಿ ಎರಡು ವರ್ಷಗಳಾಗಿವೆ. ಹಳೇ ಮಾರ್ಗಸೂಚಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಡಿಎಂಎಫ್ ಅಧ್ಯಕ್ಷರಾಗಿದ್ದರು. ಹೊಸ ಮಾರ್ಗಸೂಚಿಯಲ್ಲಿ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಲಿದ್ದಾರೆ. ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.