
ಸಂಡೂರು: ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಯವಂತೆ ಒತ್ತಾಯಿಸಿ ಡಿಸೆಂಬರ್ 31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಸಿಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆದಿಮೂರ್ತಿ ತಿಳಿಸಿದರು.
ಪಟ್ಟಣದ ಕೆಎಸ್ಆರ್ ಟಿಸಿ ಡಿಪೊದಲ್ಲಿ ಶನಿವಾರ ಸಂಜೆ ಸಿಬ್ಬಂದಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘2020 ರ ಜನವರಿಯಿಂದ ಈವರೆಗೆ 38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು. 2024 ರ ಜನವರಿಯಿಂದ ಹೊಸ ವೇತನ ಪರಿಷ್ಕರಣೆ ಹಾಗೂ ಇತರೆ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು. ನಿವೃತ್ತ ನೌಕರರಿಗೆ 2024 ರ ಜೂನ್ 27 ರ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದನ್ನೂ ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು’ ಎಂದು ಒತ್ತಾಯಿಸಿದರು.
‘ಈ ಬಗ್ಗೆ ಬೆಳಗಾವಿ ಅಧಿವೇಶನದ ಮೊದಲ ದಿನವೇ ಡಿಸೆಂಬರ್ 31ರ ಮುಷ್ಕರದ ನೋಟಿಸನ್ನು ನೀಡಿದ್ದೇವೆ. ಜಂಟಿ ಕ್ರಿಯಾ ಸಮಿತಿ ನೀಡಿದ ನೋಟಿಸನ್ನು ಸರ್ಕಾರದ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವೀಕರಿಸಿದ್ದರು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬೇಡಿಕೆ ಈಡೇರಿಸುವ ವಾಗ್ದಾನ ನೀಡಿದ್ದರು. ಆದರೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ನಾಲ್ಕು ನಿಗಮಗಳ ಸಾರಿಗೆ ನೌಕರರ ನಿರ್ಧಾಷ್ಟಾವಧಿ ಮುಷ್ಕರ ಅನಿವಾರ್ಯವಾಗಿದೆ. ಬೇಡಿಕೆ ಈಡೇರುವ ತನಕ ಕರ್ತವ್ಯಕ್ಕೆ ಹಾಜರಾಗದೆ ನೌಕರರು ಹೋರಾಟ ಮುಂದುವರೆಸಲಿದ್ದಾರೆ’ ಎಂದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ ಮಹಾಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ಕೆಎಸ್ಆರ್ ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಷನ್ ಸಿಐಟಿಯು ಡಿಪೊ ಅಧ್ಯಕ್ಷ ದಸ್ತಗಿರಿ ಸಾಬ್, ಬಸಪ್ಪ, ಟಿ.ಚನ್ನಪ್ಪ, ಗಾದಿಲಿಂಗಪ್ಪ, ಶಿವಕುಮಾರ್, ಟೋನಿ, ಸರ್ಪಭೂಷಣ, ಚನ್ನನಗೌಡ, ಕೆ.ಬಸವರಾಜ್ ಹಾಗೂ ಡಿಪೊದ ಕಾರ್ಮಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.