
ಬಳ್ಳಾರಿ: ‘ಭಾರತದ ಸಂವಿಧಾನ ನಮ್ಮ ದೇಶದ ಹೃದಯವಿದ್ದಂತೆ’ ಎಂದು ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತ ವೈವಿಧ್ಯತೆಯಿಂದ ಕೂಡಿರುವ ದೇಶ. ಹೀಗಾಗಿ ಭಾರತೀಯ ಸಂವಿಧಾನ ರಚಿಸುವುದು ಸುಲಭದ ಕೆಲಸವಾಗಿರಲಿಲ್ಲ. ಎಲ್ಲಾ ಧರ್ಮಗಳು, ನಂಬಿಕೆಗಳು, ಜಾತಿಗಳು ಮತ್ತು ವೈವಿಧ್ಯಮಯ ಸಿದ್ಧಾಂತಗಳ ಜನರ ಒಟ್ಟುಗೂಡಿಸುವುದು ಕಷ್ಟಕರವಾಗಿತ್ತು. ಸಂವಿಧಾನವನ್ನು ರಚಿಸುವಾಗ ಸಾಮಾನ್ಯರ ಜೀವನವನ್ನು ಸುಧಾರಣೆ ತರುವ ತತ್ವಗಳನ್ನು ಸೇರಿಸಿ ಜಾರಿಗೆ ತರಲಾಯಿತು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಮಾತನಾಡಿ, ‘ವಿದ್ಯಾರ್ಥಿಗಳು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಜಗತ್ತಿನ ಅತಿದೊಡ್ಡ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ಭಾರತೀಯರಿಗೆ ನೀಡಿದ್ದಾರೆ. ಸಂವಿಧಾನವನ್ನು ರಚಿಸಲು ಅನೇಕರ ಶ್ರಮವಿದೆ. ಬಾಬಾ ಸಾಹೇಬರು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷತೆ ವಹಿಸಿ ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗೆ ಹೊಂದುವಂತೆ ಒಂದು ಸಮಗ್ರವಾದ ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ. ನಮ್ಮ ಸಂವಿಧಾನ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ‘ಸಂವಿಧಾನವನ್ನು ಕೇವಲ ಓದಿದರೆ ಸಾಲದು. ಸಂವಿಧಾನದ ಆಶಯ ಮತ್ತು ಅದರ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಭಾರತ ದೇಶ ಸುಸ್ಥಿರ ಅಭಿವೃದ್ಧಿ ಹೊಂದಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗಂಗಾವತಿಯ ಎಸ್‌ಕೆಎನ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಾರಿಕರ ಫಣಿರಾಜ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ‘ನನ್ನ ಮತ ನನ್ನ ಹಕ್ಕು’ ಎಂಬ ಧ್ಯೇಯವಾಕ್ಯದ ಮಹತ್ವ ತಿಳಿಯಲು ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಾಲಿಕೆ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದಿನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಬಳ್ಳಾರಿ ತಾಲ್ಲೂಕು ತಹಶೀಲ್ದಾರ ರೇಖಾ ಮತ್ತಿತತರು ಇದ್ದರು.
ಸೈಕಲ್ ಏರಿದ ಡಿಸಿ ಸಿಇಒ ಸಂವಿಧಾನ ದಿನಾಚರಣೆ ಅಂಗವಾಗಿ ಬುಧವಾರ ಬೆಳಗ್ಗೆ ಜಾಥಾ ನಡೆಯಿತು. ಜಾಥಾಕ್ಕೆ ಮೇಯರ್ ಪಿ.ಗಾದೆಪ್ಪ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ. ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಹಸಿರು ನಿಶಾನೆ ತೋರಿಸಿ ಸೈಕಲ್ ಸವಾರಿ ಮಾಡಿದರು. ಜಾಥಾದಲ್ಲಿ ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದ್ದರು. ಜಾಥಾವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡು ಎಚ್.ಆರ್.ಗವಿಯಪ್ಪ ವೃತ್ತ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಮಾರ್ಗವಾಗಿ ಮಹರ್ಷಿ ವಾಲ್ಮೀಕಿ ಭವನದ ವೇದಿಕೆ ಕಾರ್ಯಕ್ರಮ ಸ್ಥಳ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.