ADVERTISEMENT

ಹಂಪಿ ಆರ್ಟ್‌ ಲ್ಯಾಬ್‌ನಲ್ಲಿ ‘ನೀಲ ಕಲೆ ಉತ್ಸವ’

ಭಾರತ ಮೂಲದ ‘ಇಂಡಿಗೋ’ ಚಾರಿತ್ರಿಕ ಮಹತ್ವ ಸಾವು ಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:20 IST
Last Updated 5 ನವೆಂಬರ್ 2025, 5:20 IST
ನೀಲವರ್ಣ (ಇಂಡಿಗೋ) ಕಲ್ಪನೆಯಲ್ಲಿ ರಚಿಸಲಾದ ಕಲಾಕೃತಿಯನ್ನು ತೋರಣಗಲ್‌ನ ಜೆಎಸ್‌ಡಬ್ಲ್ಯೂ ‘ಹಂಪಿ ಆರ್ಟ್‌ ಲ್ಯಾಬ್‌’ನಲ್ಲಿ ಪ್ರದರ್ಶನಕ್ಕೆ ಇರಿಸಿರುವುದು 
ನೀಲವರ್ಣ (ಇಂಡಿಗೋ) ಕಲ್ಪನೆಯಲ್ಲಿ ರಚಿಸಲಾದ ಕಲಾಕೃತಿಯನ್ನು ತೋರಣಗಲ್‌ನ ಜೆಎಸ್‌ಡಬ್ಲ್ಯೂ ‘ಹಂಪಿ ಆರ್ಟ್‌ ಲ್ಯಾಬ್‌’ನಲ್ಲಿ ಪ್ರದರ್ಶನಕ್ಕೆ ಇರಿಸಿರುವುದು    

ಬಳ್ಳಾರಿ: ಜೆಎಸ್‌ಡಬ್ಲ್ಯು ಫೌಂಡೇಶನ ‘ಹಂಪಿ ಆರ್ಟ್ ಲ್ಯಾಬ್ಸ್ (ಎಚ್‌ಎಎಲ್‌)’ನಲ್ಲಿ ‘ಬ್ಲೂ ಫೀಚರ್ಸ್‌: ರೀಇಮ್ಯಾಜಿನಿಂಗ್ ಇಂಡಿಗೋ’ ಎಂಬ ಪ್ರದರ್ಶನ ಆಯೋಜನೆಗೊಂಡಿದೆ.

ಕೌಶಲ, ಕಲ್ಪನೆ ಮತ್ತು ಎಲ್ಲ ಎಲ್ಲೆಗಳನ್ನು ಮೀರಿದ ಕಲಾಕೃತಿಗಳು ಈ ಪ್ರದರ್ಶನದಲ್ಲಿ ಇರಲಿದ್ದು, ದೇಶೀಯ ಮತ್ತು ಅಂತರರಾಷ್ಟ್ರೀಯ ಕಲಾವಿದರಿಗೆ ವೇದಿಕೆಯಾಗಿದೆ ಎಂದು ಎಚ್‌ಎಎಲ್‌ ತಿಳಿಸಿದೆ. 

ಈ ಪ್ರದರ್ಶನವು ಜೆಎಸ್ಡಬ್ಲ್ಯು ಫೌಂಡೇಶನ್‌ನ ಅಧ್ಯಕ್ಷೆ ಸಂಗೀತಾ ಜಿಂದಾಲ್ ಕಲ್ಪನೆಯಾಗಿದ್ದು, ನೀಲ ವರ್ಣ(ಇಂಡಿಗೊ)ದ ಕಲಾತ್ಮಕತೆ, ಚಾರಿತ್ರಿಕ ಹಿನ್ನೆಲೆ ಮತ್ತು ಪರಿಸರ ಆಯಾಮಗಳನ್ನು ಅನಾವರಣೆ ಮಾಡಲಿದೆ ಎಂದು ಎಚ್‌ಎಎಲ್‌ ಮಾಹಿತಿ ನೀಡಿದೆ.

ADVERTISEMENT

ಮುಂಬೈನ ಶಿಲ್ಪಿ ಮನೀಶ  ನೈ, ಪ್ಯಾರಿಸ್ ಮತ್ತು ಮಾಲಿ ಮೂಲದ ಅಬೂಬಕರ್ ಫೋಫಾನಾ, ಜಪಾನ್‌ನ ಪ್ರಸಿದ್ಧ ಸಮೂಹ ಸ್ಟುಡಿಯೋ ಬುಐಯ್ಸೊ ಮತ್ತು ವಸ್ತುಗಳ ರೂಪಾಂತರದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಆಳ್ವಾರ್‌ ಬಾಲಸುಬ್ರಹ್ಮಣ್ಯಂ ಅವರ ಕಲಾಕೃತಿಗಳನ್ನು ಇಲ್ಲಿ ಇರಿಸಲಾಗಿದೆ. 

ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿದ ಅಧ್ಯಕ್ಷೆ ಸಂಗೀತಾ ಜಿಂದಾಲ್, ‘ಈ ಬಾರಿಯ ಬ್ಲೂ ಫೀಚರ್ಸ್‌ ಹಂಪಿ ಆರ್ಟ್ ಲ್ಯಾಬ್ಸ್‌ನ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಸಂಪ್ರದಾಯ ಮತ್ತು ನಾವೀನ್ಯತೆಗಳ ನಡುವಿನ ಹೊಸ ಸಂಭಾಷಣೆಯನ್ನು ಇದು ಪೋಷಿಸುತ್ತದೆ. ಭಾರತದ ಮಣ್ಣಿನ ನೀಲವರ್ಣ (ಇಂಡಿಗೋ)ವು ಸುಸ್ಥಿರತೆ, ಸೃಜನಶೀಲತೆ ಮತ್ತು ಜಾಗತಿಕ ಸಂವಾದದ ಸಂಕೇತವಾಗಿದೆ. ಈ ಪ್ರದರ್ಶನದೊಂದಿಗೆ, ಕಲೆ ಸಮುದಾಯಗಳನ್ನು ಸಂಪರ್ಕಿಸುವ, ಬದಲಾವಣೆಗೆ ಪ್ರೇರಣೆ ನೀಡುವ  ಉದ್ದೇಶವನ್ನು ಜೆಎಸ್‌ಡಬ್ಲ್ಯೂ ಫೌಂಡೇಶನ್‌ ಹೊಂದಿದೆ’ ಎಂದು ಹೇಳಿದರು. 

‘ಈ ಪ್ರದರ್ಶನವನ್ನು 2026ರ ಆರಂಭದವರೆಗೆ ಮುಂದುವರಿಸುವ ಯೋಜನೆಯನ್ನು ಹಂಪಿ ಆರ್ಟ್‌ ಲ್ಯಾಬ್‌ ಹೊಂದಿದೆ. ಈ ಗ್ಯಾಲರಿಗೆ ಭೇಟಿ ನೀಡುವವರಿಗೆ ಭಾರತ ಮೂಲದ ನೀಲವರ್ಣ(ಇಂಡಿಗೋ)ದ ಜಾಗತಿಕ ವ್ಯಾಪಾರ ಮಾರ್ಗಗಳ ಕುರಿತು ಮಾಹಿತಿ ಸಿಗಲಿದೆ. ಕಲಾಕೃತಿಗಳ ಕಲಾಸ್ವಾದ ಅನುಭವಿಸಲು ಸಾಧ್ಯವಾಗಲಿದೆ’ ಎಂದು ಆರ್ಟ್‌ ಲ್ಯಾಬ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.