ADVERTISEMENT

ಕೊಟ್ಟೂರು | ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾದ ಪುಸ್ತಕ ಗೂಡು

ಗುರುಪ್ರಸಾದ್‌ ಎಸ್‌.ಎಂ
Published 26 ಜನವರಿ 2026, 6:18 IST
Last Updated 26 ಜನವರಿ 2026, 6:18 IST
ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಸ್ಧಾಪಿಸಿರುವ ಪುಸ್ತಕ ಗೂಡು ಗ್ರಂಥಾಲಯದಲ್ಲಿ ಗ್ರಾಮಸ್ಧರು ಓದಿನಲ್ಲಿ ನಿರತರಾಗಿದ್ದಾರೆ
ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಸ್ಧಾಪಿಸಿರುವ ಪುಸ್ತಕ ಗೂಡು ಗ್ರಂಥಾಲಯದಲ್ಲಿ ಗ್ರಾಮಸ್ಧರು ಓದಿನಲ್ಲಿ ನಿರತರಾಗಿದ್ದಾರೆ   

ಕೊಟ್ಟೂರು: ಇಂದಿನ ಡಿಜಿಟಲ್ ಯುಗದಲ್ಲಿ ಓದುವ ಹವ್ಯಾಸ ಇಳಿಮುಖವಾಗುತ್ತಿರುವ ಸಮಯದಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವ ಪುಸ್ತಕ ಗೂಡು ಇತರೆ ಗ್ರಂಥಾಲಯಗಳಿಗೆ ಮಾದರಿಯಾಗಿದೆ. ಓದುಗರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.

ಹ್ಯಾಳ್ಯಾ ಗ್ರಾಮ ಪಂಚಾಯಿತಿ ವತಿಯಿಂದ 2024 ರಲ್ಲಿ ₹30 ಸಾವಿರ ವೆಚ್ಚದಲ್ಲಿ ಅಧ್ಯಕ್ಷೆ ಡಿ.ಹಾಲಮ್ಮ ನಿಜೇಶ್ ಕುಮಾರ್, ಪಿಡಿಒ ಸಿ.ಎಚ್.ಎಂ.ಗಂಗಾಧರಯ್ಯ ಮುಂದಾಳತ್ವದಲ್ಲಿ ಸ್ಧಾಪನೆಗೊಂಡ ಈ ಪುಸ್ತಕ ಗೂಡಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದ್ ಕುಮಾರ್ ಚಾಲನೆ ನೀಡಿದ್ದರು.

ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಗ್ರಾಮಸ್ಥರಿಗೆ ಜ್ಞಾನ ದಾಹ ತಣಿಸಲು ಈ ಗೂಡಿನಲ್ಲಿ 900 ಪುಸ್ತಕಗಳನ್ನು ಜೋಡಿಸಿದ್ದು ಓದುಗರಿಗೆ ಕುಳಿತುಕೊಳ್ಳಲು ಆಸನ, ಫ್ಯಾನ್ ವ್ಯವಸ್ಥೆ ಕಲ್ಪಿಸಿರುವುದು ಗಮನಾರ್ಹ. ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದರಿಂದ ಪುಸ್ತಕಗಳ ಸುರಕ್ಷತೆಗೆ ಸಹಕಾರಿಯಾಗಿದೆ.

ADVERTISEMENT

ಪುಸ್ತಕ ಗೂಡಿನಲ್ಲಿ ಕುವೆಂಪು, ವಿ.ಕೃ.ಗೋಕಾಕ್, ಬೇಂದ್ರೆ, ಪೂರ್ಣ ಚಂದ್ರ ತೇಜಸ್ವಿ, ಚಂದ್ರಶೇಖರ್ ಕಂಬಾರ್, ಕುಂ.ವೀ, ಈಚನೂರ್ ಶಾಂತ, ವ್ಯಾಸರಾಯ ಬಲ್ಲಾಳ ಮುಂತಾದ ಲೇಖಕರ, ಕವಿಗಳ ಕಥಾ ಸಂಕಲನ, ಕವನ ಸಂಕಲನ ಹಾಗೂ ಕಾದಂಬರಿ, ನಾಟಕಗಳ ಕೃತಿಗಳನ್ನು ನಾವಿಲ್ಲಿ ಕಾಣಬಹುದು.

‘ಓದುವ ಹವ್ಯಾಸ ಇದ್ದರೆ ಸೋಮಾರಿತನಕ್ಕೆ ಜಾಗವಿಲ್ಲ’, ‘ ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ’, ‘ ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಅದು ನಿನ್ನನ್ನು ತಲೆಯೆತ್ತುವಂತೆ ಮಾಡುತ್ತದೆ’ ಎಂಬ ಗೋಡೆ ಬರಹಗಳು ನೋಡುಗರ ಮನ ಸೆಳೆಯುತ್ತಿವೆ.

24/7 ತೆರದ ಪುಸ್ತಕ ಗೂಡಿನಲ್ಲಿ ಇಂದಿಗೂ ಒಂದೂ ಪುಸ್ತಕವೂ ಕಳವಾಗದಿರುವುದು ಗ್ರಾಮಸ್ಧರ ಪುಸ್ತಕ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮದ ಮುಖಂಡ ನಾಣಿಕೇರಿ ಕೊಟ್ರೇಶ್ ಹೆಮ್ಮೆಯಿಂದ ಹೇಳುತ್ತಾರೆ.

’ನಮ್ಮೂರಿನ ಜನ ಸಮಯವನ್ನು ವ್ಯರ್ಥಗೊಳಿಸದೇ ಓದುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಕಥೆ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಅಗತ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಯತ ಕಾಲಿಕೆಗಳು ಇಲ್ಲಿವೆ. ಹಾಗಾಗಿ ಪುಸ್ತಕ ಗೂಡು ಓದುವ ಹವ್ಯಾಸವನ್ನು ನಮ್ಮೆಲ್ಲರಿಗೂ ರೂಢಿಸಿದೆ’ ಎಂದು ಟಿ.ಮಹಾಂತೇಶ್ ಹೇಳುತ್ತಾರೆ.

’ಪುಸ್ತಕ ಜೋಳಿಗೆ ಎಂಬ ಕಾರ್ಯಕ್ರಮದಡಿ ಜನರಿಂದ ಪುಸ್ತಕಗಳನ್ನು ದಾನವಾಗಿ ಪಡೆಯುವುದರ ಜೊತೆಯಲ್ಲಿ ಗ್ರಂಥಾಲಯ ಇಲಾಖೆ ರವಾನಿಸುವ ಪುಸ್ತಕಗಳು ಸಹ ಈ ಗೂಡಿಗೆ ಸೇರ್ಪಡೆಯಾಗಿವೆ. ಡಿಜಿಟಲೀಕರಣಗೊಂಡಿರುವ ಎಲ್ಲಾ ಭಾಷಾ ಪುಸ್ತಕಗಳನ್ನು ಕಂಪ್ಯೂಟರ್‌ ಮೂಲಕ ವಿದ್ಯಾರ್ಥಿಗಳು ಓದುತ್ತಿರುವುದು ಸಹ ಗಮನಾರ್ಹ ಸಂಗತಿ’ ಎಂದು ಗ್ರಂಥಪಾಲಕ ಬಿ.ಲೋಕೇಶ್ ಹೇಳುತ್ತಾರೆ.

’ವಿದ್ಯಾರ್ಥಿಗಳನ್ನು ಸೆಳೆಯಲು ‘ ಅಮ್ಮನಿಗಾಗಿ ಒಂದು ಪತ್ರ’ , ‘‘ಚಿಣ್ಣರ ಚಿತ್ರಕಲೆ’ ಎಂಬ ವಿನೂತನ ಕಾರ್ಯಕ್ರಮಗಳು ಹಾಗೂ ವಿಶೇಷ ಚೇತನರಿಗೆ ನೆರವಾಗುವ ಆಟದ ಸಾಮಾಗ್ರಿಗಳು, ಚೆಸ್, ಕೇರಂ ಮುಂತಾದ ಕ್ರೀಡೋಪಕರಣಗಳ ಮೂಲಕ ವಿದ್ಯಾರ್ಥಿಗಳನ್ನು ಓದುವ ಹವ್ಯಾಸ ರೂಡಿಸಲು ಗ್ರಾಮ ಪಂಚಾಯಿತಿ ಹಾಗೂ ಗ್ರಂಥಪಾಲಕರ ಪರಿಶ್ರಮವು ಅಡಗಿದೆ’ ಎಂದು ಕೆ.ಹರ್ಷವರ್ಧನ್ ಹೇಳುತ್ತಾರೆ.