ADVERTISEMENT

ಗುಣಾತ್ಮಕ ಶಿಕ್ಷಣಕ್ಕಾಗಿ ನಡಿಗೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:17 IST
Last Updated 15 ಡಿಸೆಂಬರ್ 2019, 13:17 IST
ಯುವಧ್ವನಿ ಹಾಗೂ ‘ಸ್ವೆರೋಸ್’ ಸಂಘಟನೆಯ ಕಾರ್ಯಕರ್ತರು ಭಾನುವಾರ ಹೊಸಪೇಟೆಯಲ್ಲಿ ಜನಜಾಗೃತಿ ಜಾಥಾ ನಡೆಸಿದರು
ಯುವಧ್ವನಿ ಹಾಗೂ ‘ಸ್ವೆರೋಸ್’ ಸಂಘಟನೆಯ ಕಾರ್ಯಕರ್ತರು ಭಾನುವಾರ ಹೊಸಪೇಟೆಯಲ್ಲಿ ಜನಜಾಗೃತಿ ಜಾಥಾ ನಡೆಸಿದರು   

ಹೊಸಪೇಟೆ: ‘ತಳಸಮುದಾಯಗಳ ಘನತೆಯ ಬದುಕಿಗೆ, ಗುಣಾತ್ಮಕ ಶಿಕ್ಷಣಕ್ಕಾಗಿ ನಮ್ಮ ನಡಿಗೆ’ ಶೀರ್ಷಿಕೆ ಅಡಿ ಯುವಧ್ವನಿ ಹಾಗೂ ‘ಸ್ವೆರೋಸ್’ ಸಂಘಟನೆಯ ಕಾರ್ಯಕರ್ತರು ಭಾನುವಾರ ಬೆಳಿಗ್ಗೆ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಿದರು.

ಇಲ್ಲಿನ ಡಾ. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕ್ರಾಂತಿ ಗೀತೆಗಳನ್ನು ಹಾಡಿದರು. ಬಳಿಕ ನಗರದ ಪ್ರಮುಖ ಮಾರ್ಗಗಳಲ್ಲಿ ಜಾಥಾ ನಡೆಸಿದರು. ರೋಟರಿ ವೃತ್ತ, ಬಸ್‌ ನಿಲ್ದಾಣ, ವಡಕರಾಯ ದೇವಸ್ಥಾನ, ಬಳ್ಳಾರಿ ರಸ್ತೆ ಮೂಲಕ ಹಾದು ಬಲಿಜ ಭವನದ ಬಳಿ ಜಾಥಾ ಕೊನೆಗೊಂಡಿತು. ಮಾಜಿ ದೇವದಾಸಿಯರು, ಅವರ ಮಕ್ಕಳು ಕೂಡ ಪಾಲ್ಗೊಂಡಿದ್ದರು.

ಮುಖಂಡ ಆರ್‌.ವಿ.ಚಂದ್ರಶೇಖರ್ ಮಾತನಾಡಿ, ‘ಗುಣಾತ್ಮಕ ಶಿಕ್ಷಣ ಎನ್ನುವುದು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಹಣವಿದ್ದವರು ಅವರ ಮಕ್ಕಳನ್ನು ಕಾನ್ವೆಂಟ್‌ಗಳಲ್ಲಿ ಓದಿಸುತ್ತಾರೆ. ಆದರೆ, ಬಡ, ಬುಡಕಟ್ಟು, ತಳಸಮುದಾಯದ ಮಕ್ಕಳಿಗೆ ಅಂತಹ ಶಿಕ್ಷಣ ಸಿಗುತ್ತಿಲ್ಲ. ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಕೊಡುವ ಕೆಲಸ ಸರ್ಕಾರ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈ ಹಿಂದೆ ನಾವು ಅನ್ನಕ್ಕಾಗಿ ಹೋರಾಟ ನಡೆಸುತ್ತಿದ್ದೆವು. ಈಗ ಅದು ನಮಗೆ ಬೇಕಿಲ್ಲ. ಉತ್ತಮ ಶಿಕ್ಷಣ ಕೊಟ್ಟರೆ ನಾವೇ ನಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಗುಣಾತ್ಮಕ ಶಿಕ್ಷಣ ಕೊಟ್ಟರೆ ಎಲ್ಲರೂ ಸರಿಸಮಾನರಾಗಿ ಘನತೆಯ ಬದುಕು ಬದುಕಲು ಸಾಧ್ಯ’ ಎಂದರು.

ಸಂಘಟನೆಯ ನಸ್ರೀನ್, ಭಾಗ್ಯಲಕ್ಷ್ಮಿ, ಸಣ್ಣ ಮಾರೆಪ್ಪ, ಅಶ್ವರಾಮು, ಸುಶಾಂತ್ ದಾನಪ್ಪ, ಯಮನೂರಪ್ಪ, ಸಿ.ಜಿ.ಲಕ್ಷ್ಮಿಪತಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.