ಬಳ್ಳಾರಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಬಳ್ಳಾರಿ ಹೊರವಲಯದ ಸಂಜೀವರಾಯನ ಕೋಟೆಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ 154 ಎಕರೆಯ ಜೀನ್ಸ್ ಪಾರ್ಕ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳ ಮತ್ತು ಹೂಡಿಕೆದಾರರ ಸಭೆ ಶನಿವಾರ ನಡೆಯಿತು.
‘ಸದ್ಯ ಜೀನ್ಸ್ ವಾಷಿಂಗ್ ಘಟಕಗಳು ಇರುವ ನಗರದ ಮುಂಡ್ರಿಗಿ ಕೈಗಾರಿಕಾ ಪ್ರದೇಶದಲ್ಲೇ ಸಮಸ್ಯೆಗಳಿವೆ. ಇನ್ನು ನಗರದಿಂದ ಹತ್ತಾರು ಕಿ.ಮೀ ದೂರದಲ್ಲಿರುವ ಸಂಜೀವರಾಯನ ಕೋಟೆಯಲ್ಲಿ ಏನು ವ್ಯವಸ್ಥೆ ಕಲ್ಪಿಸುತ್ತೀರಿ’ ಎಂದು ಜೀನ್ಸ್ ವಾಷಿಂಗ್ ಘಟಕಗಳ ಸಂಘದ ಮುಖಂಡ ಸಿರಿವೇಲು ಇಬ್ರಾಹಿಂ ಪ್ರಶ್ನಿಸಿದರು.
‘ಮುಂಡ್ರಿಗಿ ಕೈಗಾರಿಕಾ ಪ್ರದೇಶದ ನಿವೇಶನಗಳನ್ನು 10 ವರ್ಷಗಳ ಲೀಸ್ ಕಮ್ ಸೇಲ್ ಆಧಾರದಲ್ಲಿ ವಿತರಿಸಲಾಗಿದೆ. ಈಗ ನೋಂದಣಿಗೆ ಪ್ರಯತ್ನಿಸಿದರೆ, ಲಕ್ಷಾಂತರ ರೂಪಾಯಿ ಲಂಚ ಕೇಳಲಾಗುತ್ತಿದೆ. ಇದೇ ಸಮಸ್ಯೆ ಸಂಜೀವರಾಯನಕೋಟೆಯಲ್ಲಿ ಪುನರಾವರ್ತನೆಯಾದರೆ ಯಾರು ಹೊಣೆ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್, ‘ಸಂಜೀವರಾಯನ ಕೋಟೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಜೀನ್ಸ್ ಪಾರ್ಕ್ ಅತ್ಯಂತ ವ್ಯವಸ್ಥಿತ, ಸುಸಜ್ಜಿತ ಕೈಗಾರಿಕಾ ಪ್ರದೇಶ ಆಗಿರಲಿದೆ. ಮುಂಡ್ರಿಗಿ ಕೈಗಾರಿಕಾ ಪ್ರದೇಶದ ಸಮಸ್ಯೆಗಳೇ ಬೇರೆ ಇವೆ.ಇಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆಯಾದರೆ, ಒಂದು ಲಕ್ಷ ಜನಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ಸಿಗಲಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ, ಜವಳಿ ಇಲಾಖೆ ಉಪ ನಿರ್ದೇಶಕರು ಮಂಜುನಾಥ್, ಕೆಐಎಡಿಬಿ ಅಧಿಕಾರಿ ಜನಾರ್ದನ ನಾಯ್ಕ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.