ADVERTISEMENT

ಜಿಂದಾಲ್‌ಗೆ ಭೂಮಿ ಮಾರಾಟಕ್ಕೆ ಒಪ್ಪಿಗೆ | ಅಚ್ಚರಿ ತಂದ ಉಪಸಮಿತಿ ನಡೆ

ಕೆ.ನರಸಿಂಹ ಮೂರ್ತಿ
Published 9 ಜುಲೈ 2019, 20:15 IST
Last Updated 9 ಜುಲೈ 2019, 20:15 IST
   

ಬಳ್ಳಾರಿ: ಪ್ರಬಲ ವಿರೋಧದ ನಡುವೆಯೇ, ಜಿಂದಾಲ್‌ಗೆ 3,667 ಎಕರೆ ಜಮೀನನ್ನು ಮಾರಾಟ ಮಾಡಲು ದಿಢೀರ್‌ ಒಪ್ಪಿಗೆ ನೀಡಿರುವ ಸಚಿವ ಸಂಪುಟ ಉಪಸಮಿತಿಯ ನಡೆಯು, ಮೈತ್ರಿ ಸರ್ಕಾರ ಅತಂತ್ರಗೊಂಡಿರುವ ಸನ್ನಿವೇಶದಲ್ಲಿ ಸಂಚಲನ ಮೂಡಿಸಿದೆ.

ಒಮ್ಮೆ ಮಾತ್ರ ಸಭೆ ನಡೆಸಿದ್ದ ಉಪಸಮಿತಿಯು ವಿವಾದದ ಅಧ್ಯಯನ, ದೂರುಗಳ ಪರಿಶೀಲನೆ ಹಾಗೂ ಸ್ಥಳ ಭೇಟಿ ಮಾಡದೆಯೇ ಎರಡನೇ ಸಭೆಯಲ್ಲೇ ಒಪ್ಪಿಗೆ ಸೂಚಿಸಿರುವುದು ಅನುಮಾನಗಳಿಗೆ ದಾರಿ ಮಾಡಿದೆ.

ಜುಲೈ 6ರಂದು ಇಲ್ಲಿನ ಕುಡುತಿನಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌, ‘ಉಪ ಸಮಿತಿಗೆ ಕಾಲಮಿತಿಯನ್ನು ನೀಡಲಾಗುವುದಿಲ್ಲ. ಸಮಿತಿಯ ತೀರ್ಮಾನವನ್ನೇ ಒಪ್ಪುವೆ’ ಎಂದಿದ್ದರು. ಉಪಸಮಿತಿ ಇನ್ನಷ್ಟು ದಿನಗಳ ಬಳಿಕವೇ ವರದಿ ಸಲ್ಲಿಸುತ್ತದೆ ಎಂಬ ಸೂಚನೆಯೂ ಅವರ ಮಾತಲ್ಲಿತ್ತು. ಜಿಲ್ಲೆಯ ಜನರೂ ಕೂಡ ಸಮಿತಿ ಸದಸ್ಯರು ಭೇಟಿ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ತರಾತುರಿಯಲ್ಲಿ ಸಭೆ ನಡೆಸಿರುವ ಉಪಸಮಿತಿ ಜುಲೈ 8ರಂದು ಒಪ್ಪಿಗೆ ನೀಡಿದೆ.

ADVERTISEMENT

ಭೂಮಿ ಮಾರಾಟ ಮಾಡಲು ಸಚಿವ ಸಂಪುಟ ಮೇ ಮೊದಲ ವಾರದಲ್ಲಿ ತೀರ್ಮಾನಿಸಿದ ಬೆನ್ನಿಗೇ ಪ್ರಬಲ ವಿರೋಧ ವ್ಯಕ್ತವಾಗಿತ್ತು. ‘ನಿರ್ಧಾರ ಸರಿ’ ಎಂದು ಶಾಸಕ ಕೆ.ಸಿ.ಕೊಂಡಯ್ಯ ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸುತ್ತಿದ್ದಂತೆಯೇ ಹಲವೆಡೆ ಅವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಭೂಮಿಯನ್ನು ಈಗಿನ ಬೆಲೆಗೇ ಮಾರಾಟ ಮಾಡಬೇಕು. ಗುತ್ತಿಗೆಯನ್ನೇ ಮುಂದುವರಿಸಬೇಕು. ಉಪ ಸಮಿತಿ ಜಿಂದಾಲ್‌ಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂಬ ಆಗ್ರಹಗಳೆದ್ದಿದ್ದವು. ಅನಿರ್ದಿಷ್ಟ ಅವಧಿಯ ಧರಣಿ, ರಸ್ತೆ ತಡೆ, ಜಿಂದಾಲ್‌ಗೆ ಮುತ್ತಿಗೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ನಡೆದಿತ್ತು. ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಕಟು ಮಾತುಗಳಲ್ಲಿ ಸರ್ಕಾರದ ನಿರ್ಧಾರ ಖಂಡಿಸಿದ್ದರು.

ಇವುಗಳ ನಡುವೆಯೇ, ಶಾಸಕ ಸ್ಥಾನಕ್ಕೆ ಆನಂದ್‌ಸಿಂಗ್‌ ರಾಜೀನಾಮೆ ನೀಡಿದ್ದರು. ಅವರೊಂದಿಗೆ ಮಾಜಿ ಶಾಸಕ, ಕಾಂಗ್ರೆಸ್‌ನ ಅನಿಲ್‌ಲಾಡ್‌ ಸಹಿ ಸಂಗ್ರಹ ಆಂದೋಲನವನ್ನೂ ನಡೆಸಿದ್ದರು. ಆನಂದ್‌ಸಿಂಗ್‌ ತಾವು ರಾಜೀನಾಮೆ ನೀಡಲು ಜಿಂದಾಲ್‌ ಕಾರಣವನ್ನು ಮುಂದೊಡ್ಡಿದ್ದಕ್ಕೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗ, ಮೈತ್ರಿ ಸರ್ಕಾರದ ಸಚಿವರು, ಶಾಸಕರು ರಾಜೀನಾಮೆ ನೀಡಿರುವ ಹೊತ್ತಿನಲ್ಲೇ, ಉಪಸಮಿತಿಯ ಒಪ್ಪಿಗೆ ತೀರ್ಮಾನಕ್ಕೂ ಪ್ರಬಲ ವಿರೋಧ ವ್ಯಕ್ತವಾಗಿದೆ.

ವಿರೋಧಿಸಿದವರೆ ಸರ್ಕಾರ ರಚಿಸಿದರೆ?

ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸುತ್ತಿರುವ ಬಿಜೆಪಿ ಸದ್ಯ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಂದಾಲ್‌ ವಿಷಯದಲ್ಲಿ ಯಾವ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ.

* ಇದು ಅವಸರದ ತೀರ್ಮಾನ. ತೋರಣಗಲ್‌, ಜಿಂದಾಲ್‌ಗೆ ಭೇಟಿ ನೀಡದೆಯೇ ಕೈಗೊಂಡ ಅಭಿಪ್ರಾಯ ಸಂತ್ರಸ್ತ ರೈತರ ವಿರೋಧಿಯಾಗಿದೆ

-ವಿ.ಎಂ.ಶಿವಶಂಕರ್‌, ಕರ್ನಾಟಕ ಪ್ರಾಂತ ರೈತ ಸಂಘ

* ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲು ಬಿಡುವುದಿಲ್ಲ. ನಮ್ಮ ವಿರೋಧ ಮುಂದುವರಿಯುತ್ತದೆ‌

-ಕೆ.ಯರ್‍ರಿಸ್ವಾಮಿ, ಕರ್ನಾಟಕ ಜನಸೈನ್ಯ ಸಂಘಟನೆ

*ಉಪಸಮಿತಿ ಒಪ್ಪಿಗೆಯ ಹಿಂದೆ ಪ್ರಬಲ ಹಿತಾಸಕ್ತಿ ಇದೆ. ಉಪಸಮಿತಿ ಶಿಫಾರಸನ್ನು ಒಪ್ಪಬಾರದು ಎಂದು ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ

-ಎಸ್‌.ಆರ್‌.ಹಿರೇಮಠ, ಸ್ಥಾಪಕ, ಸಮಾಜ ಪರಿವರ್ತನಾ ಸಮುದಾಯ

* ಜಮೀನು ಮಾರಾಟ ಮಾಡಬಹುದು ಎಂದು ಉಪಸಮಿತಿಯು ವರದಿ ಕೊಟ್ಟರೂ, ಅದು ಅಂಗೀಕಾರವಾಗಬೇಕಲ್ಲವೆ? ಉಪಸಮಿತಿ ಏನೆಂದು ಹೇಳಿದೆ ಎಂಬುದನ್ನು ಪರಿಶೀಲಿಸಿ ಪ್ರತಿಕ್ರಿಯಿಸುವೆ

-ಅನಿಲ್‌ ಲಾಡ್‌, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.