ADVERTISEMENT

ಆನಂದ್‌ಸಿಂಗ್‌ ರಾಜೀನಾಮೆ‌ ಕೊಟ್ಟು ಹೋರಾಟಕ್ಕೆ‌ ಬರಲಿ- ಕುಡುತಿನಿ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 10:58 IST
Last Updated 18 ಜೂನ್ 2019, 10:58 IST

ಬಳ್ಳಾರಿ: 'ಶಾಸಕ ಆನಂದ್ ಸಿಂಗ್ ಪ್ರಾಮಾಣಿಕವಾಗಿ ರೈತರ ಪರವಾಗಿದ್ದರೆ, ಮೊದಲು ರಾಜೀನಾಮೆ ನೀಡಿ ಜಿಂದಾಲ್ ಹೋರಾಟಕ್ಕೆ ಧುಮುಕಲಿ' ಎಂದು ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ಹೋರಾಟದ ಯಶಸ್ಸಿನವರೆಗೆ ನಾವೇ ಅವರ ಹಿಂದೆ ಇದ್ದು ಬೆಂಬಲಿಸುತ್ತೇವೆ‌ ಎಂದರು.

'ಶಾಸಕ ಕೆ.ಸಿ.ಕೊಂಡಯ್ಯ ಜಿಂದಾಲ್ ಪರವಾಗಿ ಮತ್ತು ಆನಂದ್ ಸಿಂಗ್- ಅನಿಲ್ ಲಾಡ್ ಅವರು ಜಿಂದಾಲ್ ವಿರುದ್ಧವಾಗಿ ಮಾತಾಡಿ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆಯಲು ಸಂಚು ಹೂಡಿದ್ದಾರೆ' ಎಂದು ಆರೋಪಿಸಿದ‌ ಅವರು, 'ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜಿಂದಾಲ್ ಬೇಕಿದೆ. ಆದರೆ, ಅವರು ಯಾರೂ ಒಂದು ಎಕರೆ ಭೂಮಿಯನ್ನೂ ಕಳೆದುಕೊಂಡಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

' ಶಾಸಕ, ಸಚಿವರಾಗಿದ್ದಾಗ ಮಾತಾಡದ ಆನಂದ್ ಸಿಂಗ್, ಅನಿಲ್ ಲಾಡ್ ಈಗ ಹೋರಾಟ ಮಾಡ್ತೀವಿ ಎಂದು ಬಂದಿದ್ದಾರೆ. ಅಧಿಕಾರದಲ್ಲಿದ್ದಾಗ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಅವರು, ಧಿಡೀರನೆ ರೈತರಿಗೋಸ್ಕರ ಏನೇ ಹೋರಾಟಕ್ಕೆ ಸಿದ್ದ ಎಂದು ಬಂದಿರುವುದು ಅನುಮಾನ ಮೂಡಿಸುತ್ತದೆ' ಎಂದ ಅವರು, ' ರಾಜಕೀಯ ಲಾಭಕ್ಕಾಗಿ ಇಬ್ಬರೂ ರೈತರ ಪರ ಬಂದಿದ್ದಾರೆ' ಎಂದು ಆರೋಪಿಸಿದರು.

2009ರಲ್ಲಿ ಮಿತ್ತಲ್ ಕಂಪನಿ ಯು ಪ್ರತಿ ಎಕರೆಗೆ ₹8 ಲಕ್ಷದಿಂದ ರಿಂದ ₹ 12 ಲಕ್ಷ, 2010ರಲ್ಲಿ ಬ್ರಹ್ಮಿಣಿ ಕಂಪನಿ ಪ್ರತಿ ಎಕರೆಗೆ ₹5 ಲಕ್ಷದಿಂದ ₹6 ಲಕ್ಷ, 2011ರಲ್ಲಿಎನ್ಎಂಡಿಸಿಯು ಎಕರೆಗೆ ₹12‌ಲಕ್ಷದಿಂದ ರಿಂದ ₹ 23 ಲಕ್ಷ ನೀಡಿ ಖರೀದಿಸಿವೆ.ಅದರಂತೆ ಜಿಂದಾಲ್ ಕೂಡ ಪ್ರತಿ ಎಕರೆ ಭೂಮಿಗೆ ಕನಿಷ್ಠ ₹ 35 ಲಕ್ಷ ನೀಡಿ ಖರೀದಿಸಬೇಕು' ಎಂದು ಒತ್ತಾಯಿಸಿದರು.

ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜೂ.26ರಂದು ಮಾನ್ವಿಯಲ್ಲಿ‌ ಭೇಟಿ ಮಾಡಿ, ಜಿಂದಾಲ್ ಸಂತ್ತಸ್ತ ರೈತರ ಗ್ರಾಮದಲ್ಲಿ ವಾಸ್ತವ್ಯ ಮಾಡುವಂತೆ ಮನವಿ ಮಾಡುತ್ತೇವೆ. ಆಗ ಅವರೇ ಜಿಂದಾಲ್ ಭೂಮಿಗೆ ಬೆಲೆ ನಿಗದಿ ಮಾಡಲಿ' ಎಂದರು.

'ಜಿಂದಾಲ್ ನಲ್ಲಿ ಹೊರಗಿನವರಿಗೆ ಕೆಲಸ ಕೊಟ್ಟಿದ್ದಾರೆ. ಭೂಮಿ ಕಳೆದುಕೊಂಡಿರುವ ನಮಗೆ ಏನೂ ಕೊಟ್ಟಿಲ್ಲ‌' ಎಂದು ರೈತ ವೆಂಕಟೇಶ್ ಅಸಮಧಾನ ವ್ಯಕ್ತಪಡಿಸಿದರು.

ಕುಡಿತಿನಿ, ವೇಣಿ ವೀರಾಪುರ ಹಳ್ಳಿಗಳ ರೈತರಾದ ಕೃಷ್ಣಪ್ಪ, ಸುನೀಲ್ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.