ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಳಿಕ ದೂರಾಗಿದ್ದ ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಮತ್ತೆ ಒಂದಾಗಿದ್ದು, ಶನಿವಾರ ರಾತ್ರಿ ಜತೆಗಾಗಿ ‘ಜೂನಿಯರ್’ ಚಿತ್ರ ವೀಕ್ಷಿಸಿದರು.
ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕ ನಟರಾಗಿ ನಟಿಸಿರುವ ಚಿತ್ರವನ್ನು ಬಳ್ಳಾರಿ ನಗರದ ನಟರಾಜ ಚಿತ್ರಮಂದಿರದಲ್ಲಿ ಇಬ್ಬರೂ ನಾಯಕರು ಅಕ್ಕಪಕ್ಕ ಕುಳಿತು ವೀಕ್ಷಿಸುವ ಮೂಲಕ ತಾವು ಒಟ್ಟಾಇರುವ ಸಂದೇಶ ರವಾನಿಸಿದರು.
ಸಂಡೂರು ಉಪ ಚುನಾವಣೆಯ ಸೋಲಿನ ಹೊಣೆಗಾರಿಕೆ ವಿಚಾರವಾಗಿ ಇಬ್ಬರೂ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದರು. ಆ ಬಳಿಕ ಇಬ್ಬರೂ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಕೊಪ್ಪಳದಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಮ್ಮುಖ ಜೊತೆಯಾಗಿದ್ದರು.
ಕಿರೀಟಿ ಅವರ ಚಿತ್ರವನ್ನು ಮುಂದಿನ ದಿನಗಳಲ್ಲಿ ನೋಡುವುದಾಗಿಯೂ, ಸಿನಿಮಾಕ್ಕೆ ಶುಭ ಹಾರೈಸುವುದಾಗಿಯೂ ಶ್ರೀರಾಮುಲು ಕೆಲ ದಿನಗಳ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಹೀಗಿರುವಾಗಲೇ ಶನಿವಾರ ಇಬ್ಬರೂ ಸೇರಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಬಿಜೆಪಿಯ ಸ್ಥಳೀಯ ನಾಯಕರು, ಕಾರ್ಪೊರೇಟರ್‌ಗಳು ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.