ಕಂಪ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ಅವರು ನಾಗರಿಕರಿಂದ ಅಹವಾಲು ಸ್ವೀಕರಿಸಿದರು
ಕಂಪ್ಲಿ: ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢ ಶಾಲೆ ಕೊಠಡಿಗಳು ಶಿಥಿಲ ಮತ್ತು ಚಾವಣಿ ದುರಸ್ತಿಯಲ್ಲಿದ್ದು, ಮುನ್ನೆಚ್ಚರಿಕೆಯಾಗಿ ವಿದ್ಯಾರ್ಥಿಗಳನ್ನು ಕುಳ್ಳಿರಿಸದಂತೆ ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಮಳೆಗಾಲ ಆಗಿರುವುದರಿಂದ ತ್ವರಿತವಾಗಿ ಕೊಠಡಿಗಳ ದುರಸ್ತಿಗೆ ಶಿಕ್ಷಣ ಇಲಾಖೆ ಗಮನಹರಿಸಬೇಕು. ಮಂಜೂರಾದ ನೂತನ ಕೊಠಡಿಗಳ ಕಾಮಗಾರಿಯನ್ನೂ ಆರಂಭಿಸುವಂತೆ ತಿಳಿಸಿದರು.
ಪಟ್ಟಣದ ವಿವಿಧೆಡೆ ನಿಂತ ನೀರಿನಲ್ಲಿ ಸೊಳ್ಳೆಗಳು ಕಾಣಿಸಿಕೊಳ್ಳುವುದು, ಸಾಂಕ್ರಾಮಿಕ ರೋಗ ಹರಡದಂತೆ ಫಾಂಗಿಂಗ್ ಸಿಂಪರಣೆಗೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಸತಿ ನಿಲಯಗಳ ನಿಲಯ ಪಾಲಕರು ಗುಣಮಟ್ಟದ ಪಡಿತರ, ಮೊಟ್ಟೆ ಖರೀದಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆಯಿಸದೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿಕೊಡುವಂತೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ನರೇಗಾ ಎ.ಡಿ ಕೆ.ಎಸ್. ಮಲ್ಲನಗೌಡ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.