ADVERTISEMENT

ಕಂಪ್ಲಿ | ಗಮನಸೆಳೆದ ‘ಕಾಮಣ್ಣ’ನ ಗೊಂಬೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:14 IST
Last Updated 1 ಮಾರ್ಚ್ 2026, 2:14 IST
ಕಂಪ್ಲಿ ಕುರುಹಿನಶೆಟ್ಟಿ ಸಮಾಜದ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾಮಣ್ಣ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವ ವಿದೇಶಿ ಪತ್ರಕರ್ತೆ ‘ರತಿ’ ಮತ್ತು ರೈತ ‘ಕಾಮಣ್ಣ’ನ ಗೊಂಬೆಗಳು ಗಮನಸೆಳೆಯುತ್ತಿವೆ
ಕಂಪ್ಲಿ ಕುರುಹಿನಶೆಟ್ಟಿ ಸಮಾಜದ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾಮಣ್ಣ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವ ವಿದೇಶಿ ಪತ್ರಕರ್ತೆ ‘ರತಿ’ ಮತ್ತು ರೈತ ‘ಕಾಮಣ್ಣ’ನ ಗೊಂಬೆಗಳು ಗಮನಸೆಳೆಯುತ್ತಿವೆ   

ಕಂಪ್ಲಿ: ಹೋಳಿ ಹುಣ್ಣಿಮೆ ಅಂಗವಾಗಿ ಪಟ್ಟಣದ ವಿವಿಧೆಡೆ ಕಾಮ, ರತಿ, ಮನ್ಮಥರ ಗೊಂಬೆಗಳನ್ನು ಪ್ರತಿಷ್ಠಾಪಿಸುವುದರೊಂದಿಗೆ ಹೋಳಿ ಹುಣ್ಣಿಮೆ ಆಚರಣೆ ಶುಕ್ರವಾರ ರಾತ್ರಿಯಿಂದ ಗರಿಗೆದರಿದೆ.

ಸ್ಥಳೀಯ ಕುರುಹಿನಶೆಟ್ಟಿ ಸಮಾಜದ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾಮಣ್ಣ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವ ವಿದೇಶಿ ಪತ್ರಕರ್ತೆ ‘ರತಿ’ ಮತ್ತು ರೈತ ‘ಕಾಮಣ್ಣ’ನ ಗೊಂಬೆಗಳು ವಿಶೇಷವಾಗಿ ಗಮನಸೆಳೆಯುತ್ತಿವೆ.

ತುಂಗಭದ್ರಾ ಜಲಾಶಯದ ಎಲ್ಲ ಕ್ರೆಸ್ಟ್ ಗೇಟ್‍ಗಳ ಅಳವಡಿಕೆ ಯಾವಾಗ? ರಾಜ್ಯದ ಜಲಾಶಯಗಳು ಸುಭದ್ರವೇ? ಬೆಳೆಗೆ ವೈಜ್ಞಾನಿಕ ಬೆಲೆ ಘೋಷಣೆ ಯಾವಾಗ? ಸರ್ಕಾರ ರೈತರ ಬಗ್ಗೆ ಗಮನಹರಿಸಲಿ ಎನ್ನುವ ಪ್ರಶ್ನೆಗಳ ಕುರಿತು ವಿದೇಶಿ ಪತ್ರಕರ್ತೆ ಮತ್ತು ರೈತ ಕಾಮಣ್ಣ ನಡುವೆ ನಡೆಯುವ ಸಂವಾದ ಈ ಭಾಗದ ರೈತರ ಪ್ರಚಲಿತ ಸಮಸ್ಯೆಗಳಿಗೆ ಕೈಗನ್ನಡಿಯಾಗಿವೆ ಎಂದು ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಈ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನೇ ಪತ್ರಕರ್ತೆ ರತಿ, ರೈತ ಕಾಮಣ್ಣ ನಡೆಸುವ ಸಂವಾದ ಚಿತ್ರಣವನ್ನು ಈ ಮೂಲಕ ಬಿಂಬಿಸಲಾಗಿದೆ’ ಎಂದು ಕಾಮಣ್ಣ ಸೇವಾ ಸಮಿತಿಯ ಸದಸ್ಯರಾದ ಜಿ.ಎಚ್. ಶಶಿಧರಗೌಡ, ಅಕ್ಕಸಾಲಿ ಗಿರಿರಾಜಾಚಾರ್, ಬೂದಗುಂಪಿ ಶಿವರಾಜ, ಎಲಿಗಾರ ವೆಂಕಟರೆಡ್ಡಿ, ಯು.ಎಂ. ವಿದ್ಯಾಶಂಕರ್, ಕೆ.ವಿ. ಸಂದೀಪ್ ತಿಳಿಸಿದರು.

ವಿವಿಧೆಡೆ ಪ್ರತಿಷ್ಠಾಪನೆ: ಪಟ್ಟಣದ ದೇವಾಂಗಪೇಟೆಯ ಮಡ್ಡಿಕಟ್ಟೆ, ವೀರತ್‍ಪೇಟೆ ಬಸವೇಶ್ವರ ಗುಡಿ, ಮೇಲ್ಗಡೆ ಪೇಟೆ ಬನಶಂಕರಿ ಗುಡಿ, ಪೇಟೆ ಬಸವೇಶ್ವರ ತೇರಿನ ಮನೆ, ಕೋಟೆ ವೀರಭದ್ರೇಶ್ವರ ಗುಡಿ, ಅಮೃತಶಿಲಾ ರಾಮಚಂದ್ರ ಗುಡಿ, ಆದೋನಿ ಮಸೀದಿ ಬಳಿಯ ಗುಗ್ರಿಕಟ್ಟೆ ಬಸವೇಶ್ವರ ದೇವಸ್ಥಾನ, ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿಯೂ ಮಾ.2ರಂದು ಕಾಮ, ರತಿದೇವಿ ಗೊಂಬೆಗಳ ಪ್ರತಿಷ್ಠಾಪನೆಗೆ ಚಾಲನೆ ದೊರೆಯಲಿದೆ.
ಮಾ.3ರಂದು ಹೋಳಿ ಹುಣ್ಣಿಮೆ ದಿನ ಸಂಜೆ ಕಾಮನ ಹಾಡನ್ನು ಹಾಡುತ್ತ ಕಾಮನಪಟ ಮೆರವಣಿಗೆ ನಡೆಸಲಾಗುತ್ತದೆ. ಅಂದು ಮಧ್ಯರಾತ್ರಿ ಕಾಮ ಮತ್ತು ರತಿಯರ ಚಿತ್ರಪಟವನ್ನು ದಹಿಸಲಾಗುತ್ತದೆ. ಕಾಮ ಪ್ರತಿಷ್ಠಾಪಿಸಿದ ಆವರಣದಲ್ಲಿ ಮಾ.4ರಂದು ಹೋಳಿ ಓಕುಳಿ ರಂಗು ಪಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.