
ಕಂಪ್ಲಿ: ಕಂಪ್ಲಿ ಮತ್ತು ಕುರುಗೋಡು ಉತ್ಸವದ ಲಾಂಛನಗಳು ಹೊಸಪೇಟೆಯ ಬಾಣದಕೇರಿಯ ಕಲಾವಿದ ಬಿ. ದೀಪಕ್ ಕಲ್ಪನೆಯಲ್ಲಿ ಮೂಡಿ ಬಂದಿದೆ.
ಲಾಂಛನದಲ್ಲಿ ಕುಮಾರರಾಮನ ಕೋಟೆಯನ್ನು ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದೆ. ಕೋಟೆಯ ಮೇಲೆ ಕಂಪ್ಲಿಯ ಸೋಮನಾಥೇಶ್ವರ ಮೂರ್ತಿ ಇದೆ. ಸೂರ್ಯರಶ್ಮಿಯಿಂದ ಅಲಂಕೃತಗೊಳಿಸಲಾಗಿದೆ. ಮುಂಭಾಗದಲ್ಲಿ ಸ್ಥಳೀಯ ವೀರಗಲ್ಲು, ಭರತನಾಟ್ಯ ಕಲೆ, ಗಂಡುಗಲಿ ಕುಮಾರರಾಮ ಮೈದೋರಿ ನಿಂತ ಚಿತ್ರ ರಚಿಸಲಾಗಿದೆ. ಬಾಳೆ ಗಿಡಗಳನ್ನು ಸಾಮ್ರಾಜ್ಯದ ಸಮೃದ್ಧತೆಯ ಸಾಂಕೇತಕವಾಗಿ ಬಳಸಲಾಗಿದೆ.
ಕುರುಗೋಡು ಉತ್ಸವದ ಲಾಂಛನದಲ್ಲಿ ದೊಡ್ಡಬಸವೇಶ್ವರ ಗೋಪುರವನ್ನು ಹೊನ್ನ ಕಳಸದಂತೆ ಚಿತ್ರಿಸಲಾಗಿದೆ. ಎಡಭಾಗದಲ್ಲಿ ವೃತ್ತಾಕಾರದಲ್ಲಿ ನೀಲಮ್ಮದೇವಿಯ ಮೂರ್ತಿ, ಮಧ್ಯದಲ್ಲಿ ದೊಡ್ಡಬಸವೇಶ್ವರ ಗದ್ದುಗೆ ಮೂರ್ತಿ ಹಾಗೂ ಬಲಭಾಗದಲ್ಲಿ ಪಂಚಮುಖಿ ವೀರಭದ್ರೇಶ್ವರನ ಮೂರ್ತಿಯನ್ನು ಹಾಗೂ ಗುಹಾಂತರ ದೇವಾಲಯ, ಚಿಕ್ಕಬಸವಣ್ಣ ದೇವಾಲಯ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯಗಳನ್ನು ಚಿತ್ರಿಸಲಾಗಿದೆ.
ಕಲಾವಿದ ಬಿ. ದೀಪಕ್ ಧಾರವಾಡ ಭಾರತೀಯ ಕಲಾ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಪೇಂಟಿಂಗ್, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಫ್.ಎ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.