ADVERTISEMENT

ಕನ್ನಡದ ಅಸ್ಮಿತೆ, ಅಸ್ತಿತ್ವಕ್ಕೆ ಅಪಾಯ: ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ

ಹಂಪಿ ಕನ್ನಡ ವಿ.ವಿ. 31ನೇ ‘ನುಡಿಹಬ್ಬ’ದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಆತಂಕ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಡಿಸೆಂಬರ್ 2022, 16:30 IST
Last Updated 8 ಡಿಸೆಂಬರ್ 2022, 16:30 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ 31ನೇ ನುಡಿಹಬ್ಬ ಗುರುವಾರ ಸಂಜೆ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ನಡೆದ ನಾಡಗೀತೆಗೆ ಗಣ್ಯರೆಲ್ಲ ಎದ್ದುನಿಂತು ಗೌರವ ಸೂಚಿಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ 31ನೇ ನುಡಿಹಬ್ಬ ಗುರುವಾರ ಸಂಜೆ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ನಡೆದ ನಾಡಗೀತೆಗೆ ಗಣ್ಯರೆಲ್ಲ ಎದ್ದುನಿಂತು ಗೌರವ ಸೂಚಿಸಿದರು   

ಹೊಸಪೇಟೆ (ವಿಜಯನಗರ): ದಿನೇ ದಿನೇ ಕನ್ನಡ ಭಾಷೆ ಮಾತಾಡುವವರ ಸಂಖ್ಯೆ ಕುಗ್ಗುತ್ತಿರುವುದರಿಂದ ಕನ್ನಡದ ಅಸ್ಮಿತೆಗೆ ಬಹುದೊಡ್ಡ ಅಪಾಯ ಎದುರಾಗಿದೆ.

ಇದುಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರ ಆತಂಕ.

ಗುರುವಾರ ಸಂಜೆ ಇಲ್ಲಿ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ 31ನೇ ‘ನುಡಿಹಬ್ಬ’ದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು ತಮ್ಮ ಭಾಷಣದುದ್ದಕ್ಕೂ ಕನ್ನಡದ ಭವಿಷ್ಯತ್ತಿನ ಅಪಾಯದ ಬಗ್ಗೆ ಎಚ್ಚರಿಸಿದರು. ಅದಕ್ಕೆ ಪರಿಹಾರೋಪಾಯಗಳನ್ನು ತಿಳಿಸಿದರು. ಅವರ ಭಾಷಣದ ಸಾರ ಇಂತಿದೆ.

ADVERTISEMENT

‘ಕನ್ನಡ ಭಾಷಾ ಬಳಕೆಯ ವಿವಿಧ ಸಾಧ್ಯತೆಗಳು ಇಳಿಮುಖ ಆಗುತ್ತಿರುವಂತೆ ಜ್ಞಾನದ ವಿವಿಧ ನೆಲೆಗಳಲ್ಲೂ, ಭಾವಸ್ತರದ ಉನ್ನತ ನೆಲೆಗಳಲ್ಲೂ ಕನ್ನಡವು ತನ್ನದೇ ಆದ ಅಸ್ಮಿತೆಯನ್ನೂ, ಅಸ್ತಿತ್ವವನ್ನೂ ಕಳೆದುಕೊಳ್ಳುವ ಅಪಾಯ ಎದುರಾಗುತ್ತಿದೆ’ ಎಂದರು.

ಕನ್ನಡಿಗರು ಎಚ್ಚರಗೊಳ್ಳುವುದು ಅವಶ್ಯವಿದೆ. ಒಂದು ಸಮಾಧಾನದ ಸಂಗತಿಯೆಂದರೆ, ಬೃಹತ್ ನಗರಗಳಲ್ಲಿ ಕನ್ನಡಕ್ಕೆ ಆತಂಕವಿರುವುದೇನೊ ಸುಸ್ಪಷ್ಟ. ಆದರೆ, ಉಪನಗರಗಳಲ್ಲೂ ತಾಲ್ಲೂಕು ಮತ್ತು ಗ್ರಾಮೀಣ ಭಾಗಗಳಲ್ಲೂ ಕನ್ನಡಕ್ಕೆ ಈ ಬಗೆಯ ಆತಂಕಗಳು ಅಷ್ಟಾಗಿ ಇಲ್ಲ. ಆದರೆ, ಭವಿಷ್ಯತ್ತಿನ ಮುಂದಿನ ದಿನಗಳಲ್ಲಿ ಕನ್ನಡವು ತನ್ನ ಅಸ್ತಿತ್ವಕ್ಕೆ ಎರವಾಗುವ ಸಾಧ್ಯತೆಗಳು ಉಂಟು ಎಂದರು.

ಅಭಿವ್ಯಕ್ತಿ ಮಾಧ್ಯಮದ ಎಲ್ಲಾ ಸ್ತರಗಳಲ್ಲೂ ಕನ್ನಡದ ಬಳಕೆ ಪ್ರಧಾನವಾಗಬೇಕು. ನಮ್ಮ ಸಾಂಸ್ಕೃತಿಕ ಆಚರಣೆಗಳಲ್ಲಿ ಕನ್ನಡವೇ ನೆಲೆಗೊಳ್ಳಬೇಕು! ಆಗ ನಾಡಹಬ್ಬ-ನುಡಿಹಬ್ಬ ಎಂಬಂಥ ಅರ್ಥಪೂರ್ಣ ಸಾಂಸ್ಕೃತಿಕ, ಶೈಕ್ಷಣಿಕ ಆಚರಣೆಗಳಿಗೆ ಪ್ರಧಾನವಾಗಿ ಮಹತ್ವ ಬರುತ್ತದೆ. ಉತ್ತರಭಾರತದ ಪಶ್ಚಿಮ ಬಂಗಾಳ, ದಕ್ಷಿಣ ಭಾರತದ ತಮಿಳುನಾಡು-ತಮ್ಮ ಭಾಷೆ, ಸಾಹಿತ್ಯ, ಜ್ಞಾನ ಪರಂಪರೆಗಳನ್ನು ಕಾಪಿಟ್ಟುಕೊಳ್ಳುವ, ಸಂವರ್ಧಿಸಿಕೊಳ್ಳುವುದರ ಕಡೆಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಕೆಲಸ ಮಾಡುತ್ತಿವೆ. ನಾವು ಆ ಮಾದರಿಯನ್ನು ಅನುಸರಿಸುವ ಅಗತ್ಯವಿದೆ ಎಂದು ತಿಳಿಸಿದರು.

ನಾವು ಕನ್ನಡ ಭಾಷೆಯ ಬಳಕೆಯನ್ನು ಅನುಲಕ್ಷಿಸುತ್ತ ಎಷ್ಟೆಷ್ಟು ಸ್ತರಗಳಲ್ಲಿ ಬಳಸುತ್ತೇವೆಯೋ ಅಷ್ಟರ ಮಟ್ಟಿಗೆ ಕನ್ನಡವು ಗಣ್ಯಮಾನ್ಯವಾಗುತ್ತ ಹೋಗುತ್ತದೆ. ಆಗ ಇದು ಅನ್ನದ ಭಾಷೆಯಾಗಿ ಉಳಿಯಲೂ ಸಾಧ್ಯವಾಗುತ್ತದೆ! ಕನ್ನಡವನ್ನು ನಮ್ಮ ಭಾವದ ಭಾಷೆ, ಜ್ಞಾನದ ಭಾಷೆ ಮತ್ತು ಲೋಕದ ಭಾಷೆಯಾಗಿ ಸಂವರ್ಧಿಸಿಕೊಂಡಾಗ `ಅನ್ನದ ಭಾಷೆ’ಯಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯಾವ ನಾಡಿನಲ್ಲಿ ಮಾತೃಭಾಷೆಯು ತನ್ನ ಸ್ಥಾನವನ್ನು ಕಳೆದುಕೊಂಡು ಇನ್ನೊಂದು ಭಾಷೆಯ ಕಬಂಧಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆಯೋ ಆಗ ಆ ಭಾಷೆಯು ದುರಂತಕ್ಕೆ ಒಳಗಾಗುವುದು ನೂರಕ್ಕೆ ನೂರರಷ್ಟು ಸತ್ಯ. ಕನ್ನಡವು ಅಭಿವ್ಯಕ್ತಿಯ ಸಂವಹನದ ಸಮಸ್ತ ಸಂಗತಿಗಳಲ್ಲಿ ಹಾಸು-ಹೊಕ್ಕಾಗದೆ ಹೋದರೆ, ಕನ್ನಡ ನುಡಿಯು ಕ್ಷೀಣಿಸುವುದಂತೂ ಖಂಡಿತ ಎಂದರು.

ಭಾಷೆ ಎಂದರೆ ಮಾತನಾಡುವುದೆಂದೇ ಅರ್ಥ ತಾನೇ! ಈ ಹಿನ್ನೆಲೆಯಲ್ಲಿ ನೋಡಿದರೆ ಶೈಕ್ಷಣಿಕ ಸ್ತರದಲ್ಲೂ, ಸಾಮಾಜಿಕ ಸ್ತರದಲ್ಲೂ ಸಾಂಸ್ಕೃತಿಕ ಹಾಗೂ ವ್ಯಾವಹಾರಿಕ ಸ್ತರದಲ್ಲಿ ಕನ್ನಡವು ಕ್ಷೀಣಿಸುತ್ತಿರುವುದು ನಮಗೆ ಎದ್ದು ಕಾಣುತ್ತಿದೆ. ಇದು ಕಾಸ್ಮೋಪಾಲಿಟನ್ ನಗರಗಳಲ್ಲಿ ನಮಗೆ ಎದ್ದು ಕಾಣುತ್ತಿರುವ ಸಂಗತಿ ಎಂದು ಹೇಳಿದರು.

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ನಗರ ಪ್ರದೇಶಗಳಲ್ಲಿ ಕನ್ನಡವನ್ನು ಬಳಸುವವರ ಸಂಖ್ಯೆ ದಿನ ದಿನಕ್ಕೂ ಇಳಿಮುಖವಾಗುತ್ತಿದೆ. ಇಲ್ಲಿ ವಲಸೆ ಬಂದ ನಾಗರೀಕರು ಮತ್ತು ಇತರೆ ಭಾಷಿಕರು ಒಂದು ನೆಲೆಯಲ್ಲಿ ಕನ್ನಡ ಮಾತಿನ ಬಳಕೆಗೆ ಎರವಾಗುತ್ತಿದ್ದಾರೆ. ಕನ್ನಡ ನುಡಿಯು ಮುಂದಿನ ಭವಿಷ್ಯದಲ್ಲಿ ಶೈಕ್ಷಣಿಕ ನೆಲೆಯಲ್ಲೂ ಸಾಮಾಜಿಕ ಸ್ತರದಲ್ಲೂ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಕುಲಪತಿ ಪ್ರೊ. ಸ.ಚಿ.ರಮೇಶ, ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ, ಅಧ್ಯಯನಾಂಗದ ನಿರ್ದೇಶಕ ಪಿ. ಮಹದೇವಯ್ಯ, ವಿವಿಧ ನಿಕಾಯಗಳ ಡೀನ್‌, ಸಿಂಡಿಕೇಟ್‌ ಸದಸ್ಯರು ಇದ್ದರು.

/ಬಾಕ್ಸ್‌/

‘ಕನ್ನಡ ಜನಸಮೂಹ ಕನ್ನಡ ಕಟ್ಟಬೇಕು’

‘ಕರ್ನಾಟಕವು ಕನ್ನಡವನ್ನು ಅಧಿಕಾರಿಕವಾಗಿಯೇನೊ ನಡೆಸುತ್ತಿದೆ. ಆದರೆ, ಕನ್ನಡವನ್ನು ಸರ್ಕಾರವೋ, ಸಂಘ ಸಂಸ್ಥೆಗಳು ಮಾತ್ರ ಉಳಿಸಿಕೊಳ್ಳುವುದಲ್ಲ. ನಮ್ಮ ಕನ್ನಡ ಜನ ಸಮೂಹವು ಕನ್ನಡವನ್ನು ಕಟ್ಟಿಕೊಳ್ಳಬೇಕಾಗಿದೆ. ಇದಕ್ಕಾಗಿ ಬೇಂದ್ರೆಯವರು ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಎಂದು ಉಪಾಯಾಂತರವಾಗಿ ಹೇಳಿದ್ದಾರೆ! ನಾವು ಈ ಮಾತನ್ನು ಆಳವಾಗಿ ಯೋಚಿಸಬೇಕಾಗಿದೆ’ ಎಂದು ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.

ಕವಿ ಕುವೆಂಪು ಅವರು ಭಾಷೆಗೆ ಮೂರು ನೆಲೆಗಳುಂಟು. ಒಂದು ಲೋಕೋಪಯೋಗಿ, ಎರಡನೆಯದು ಜ್ಞಾನೋಪಯೋಗಿ ಮೂರನೆಯದು ಭಾವೋಪಯೋಗಿ. ಅವರ ಮಾತನ್ನು ಭಾಷಾತ್ರಿಪುಟಿ ತತ್ತ್ವದ ನೆಲೆಯಲ್ಲಿ 21ನೇ ಶತಮಾನದಲ್ಲಿ ಮರು ವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡವು ಸರ್ವಜ್ಞಾನಗಳ ತಾಯ್ನುಡಿ ಆಗಬೇಕಾದರೆ, ಪ್ರಾಥಮಿಕ-ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡವು ಜ್ಞಾನದ ಭಾಷೆಯಾಗಿ ರೂಪುಗೊಳ್ಳಬೇಕು. ಇದರಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಕನ್ನಡವು ಕನ್ನಡವ ಕನ್ನಡಿಸಲು ಸಾಧ್ಯವಾಗುತ್ತದೆ! ಆದರೆ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಹಂತಗಳಲ್ಲಿ ಶೇ. 90ರಷ್ಟು ಇಂಗ್ಲಿಷ್‍ಮಯವೇ ಆಗಿರುವಾಗ `ಲೋಕೋಪಯೋಗಿ ಭಾಷೆ’ಯಾಗಿ ಕನ್ನಡದ ಬಳಕೆ ಮತ್ತು ಉಳಿವು ಎಷ್ಟಿದೆ ಎಂಬುದನ್ನು ಚಿಂತಿಸಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.