ADVERTISEMENT

ಬಳ್ಳಾರಿ ನಗರ: ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಅನಿಲ್ ಲಾಡ್ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 12:41 IST
Last Updated 20 ಏಪ್ರಿಲ್ 2023, 12:41 IST
   

ಬಳ್ಳಾರಿ: ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಅನಿಲ್ ಲಾಡ್ ಗುರುವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮೊದಲು ಲಾಡ್ ಕೋಟೆ ಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆ ಮಹಾನಗರ ಪಾಲಿಕೆ ಕಚೇರಿಗೆ ಧಾವಿಸಿ ಚುನಾವಣಾಧಿಕಾರಿ, ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಆನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಜನರ ಬೆಂಬಲ ಸಿಕ್ಕಿದೆ. ಇಲ್ಲೂ ಮತದಾರರು ಜೆಡಿಎಸ್‌ಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳು ರೆಡ್ಡಿ ಸಮುದಾಯಕ್ಕೆ ಮಣೆ ಹಾಕಿವೆ. ಕಾಂಗ್ರೆಸ್‌ ಭರತ್ ರೆಡ್ಡಿಗೆ ಯಾವ ಆಧಾರದಲ್ಲಿ ಟಿಕೆಟ್ ಕೊಟ್ಟಿದೆ ಎಂಬುದು ಗೊತ್ತಾಗಿಲ್ಲ. ಕಾಂಗ್ರೆಸ್‌, ಜಾತಿ ಲೆಕ್ಕಾಚಾರದಲ್ಲಿ ರಾಜಕಾರಣ ಮಾಡಬೇಕಿತ್ತು. ಬೇರೆ ಪಕ್ಷಗಳು ಟಿಕೆಟ್‌ ಕೊಟ್ಟಿರುವ ಜಾತಿ ಬಿಟ್ಟು ಬೇರೆ ಜಾತಿಗೆ ಟಿಕೆಟ್‌ ಕೊಡಬೇಕಿತ್ತು. ಅದರಲ್ಲಿ ಸೋತಿದೆ’ ಎಂದು ವಿಶ್ಲೇಷಿಸಿದರು.

‘ಕಾಂಗ್ರೆಸ್‌ ಏನೇನೂ ಕೆಲಸ ಮಾಡದ ಭರತ್‌ ರೆಡ್ಡಿಗೆ ಟಿಕೆಟ್‌ ನೀಡಿದೆ. ಪಕ್ಷಕ್ಕೆ ಸಮಾಜಕ್ಕೆ ಅವರ ಕೊಡುಗೆ ಏನು? ನಾನು ಶಾಸಕನಾಗಿ ಬಳ್ಳಾರಿ ನಗರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸದ ಬಗ್ಗೆ ಪುಸ್ತಕವೇ ಇದೆ’ ಎಂದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್‌ ಎರಡು ಸ್ಥಾನಗಳಲ್ಲಿ ಗೆಲ್ಲಲಿದೆ. ಒಂದು ಬಳ್ಳಾರಿ ನಗರ. ಮತ್ತೊಂದು ಹಗರಿಬೊಮ್ಮನಹಳ್ಳಿ ಕ್ಷೇತ್ರ. ಅಲ್ಲಿ ನೇಮಿರಾಜ್‌ ನಾಯ್ಕ್‌ ಬಿಜೆಪಿ ಅಭ್ಯರ್ಥಿ ಎಂದು ಲಾಡ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಈ ಮೊದಲು ಜೆಡಿಎಸ್‌ ಅಲ್ಲಾಬಕಾಷ್‌ ಅಲಿಯಾಸ್ ಮುನ್ನಾಭಾಯ್‌ ಅವರನ್ನು ಅಭ್ಯರ್ಥಿ ಎಂದು ಪ್ರಕಟಿಸಿತ್ತು. ಈಗ ನನಗೆ ಟಿಕೆಟ್‌ ನೀಡಲಾಗಿದೆ. ಮುನ್ನಾಭಾಯ್‌ ಅವರ ಜತೆ ಮನವೊಲಿಸುವಂತೆ ಜೆಡಿಎಸ್‌ ನಾಯಕರು ಸಲಹೆ ಮಾಡಿದ್ದಾರೆ. ಅವರ ಮನೆಗೆ ಹೋಗಿ ಮನವೊಲಿಸಿ ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತೇನೆ‘ ಎಂದು ಅವರು ತಿಳಿಸಿದರು.

‘ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಮತ ಬ್ಯಾಂಕ್ ಇದೆ. ನಾನು ಹೋರಾಟಗಾರ, ನಾನು ಕ್ಷತ್ರಿಯ ಸಮಾಜದವನು, ಶಿವಾಜಿ ಮಹಾರಾಜರ ಪರಂಪರೆ ನಮ್ಮದು, ಹೊಂದಾಣಿಕೆ ಮಾಡಿಕೊಳ್ಳವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭರತ್‌ ರೆಡ್ಡಿ ಕುಕ್ಕರ್ ಹಂಚಿದಾಗಲೇ ನನಗೆ ಅನುಮಾನ ಬಂತು. ಇದರ ಹಿಂದೆ ಯಾರು ಯಾರು ಇದ್ದಾರೆ ಎಂಬುದನ್ನು ತಿಳಿದುಕೊಂಡೆ. ಟಿಕೆಟ್‌ ನಿರಾಕರಿಸುವ ಮೂಲಕ ಕಾಂಗ್ರೆಸ್‌ ನಾಯಕರು ನನಗೆ ಅನ್ಯಾಯ ಮಾಡಿದರು ಎಂದು ಅವರು ನುಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಮೀನಳ್ಳಿ ತಾಯಣ್ಣ, ಜಿಲ್ಲಾಧ್ಯಕ್ಷ ಸೋಮಲಿಂಗನ ಗೌಡ ಇದ್ದರು.

ನಾಸಿರ್‌ ಪಾಲಿಕೆ ಚುನಾವಣೆ ಗೆಲ್ಲಲಿ...

‘ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಸಯ್ಯದ್‌ ನಾಸಿರ್‌ ಹುಸೇನ್‌ ಬಳ್ಳಾರಿಯಲ್ಲಿ ಪಾಲಿಕೆ ಚುನಾವಣೆಗೆ ನಿಂತು ಗೆದ್ದು ಆಮೇಲೆ ಮಾತನಾಡಲಿ’ ಎಂದು ಲಾಡ್‌ ಸವಾಲು ಹಾಕಿದರು.

‘ಅನಿಲ್‌ ಲಾಡ್‌ ಅವರ ಜತೆ ಮಾತನಾಡುತ್ತೇವೆ. ನಾಮಪತ್ರ ಸಲ್ಲಿಸಲು ಬಿಡುವುದಿಲ್ಲ ’ ಎಂದು ಸಯ್ಯದ್‌ ನಾಸಿರ್ ಹುಸೇನ್‌ ಹೇಳಿದ್ದಾರೆಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.

‘ನನ್ನನ್ನು ಸ್ಥಳೀಯರಲ್ಲ ಎನ್ನುತ್ತಾರೆ. ಹಾಗಾದರೆ ನಾಸಿರ್‌ ಹುಸೇನ್‌ ಎಲ್ಲಿಯವರು? ಅವರು ಮಂಗಳೂರು ಮೂಲದವರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.