ADVERTISEMENT

ಖಾತೆ ಬದಲಿಸದಿದ್ದರೆ ರಾಜೀನಾಮೆ: ಸಚಿವ ಆನಂದ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 17:23 IST
Last Updated 7 ಆಗಸ್ಟ್ 2021, 17:23 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌    

ಬಳ್ಳಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವುದರ ಬೆನ್ನಲ್ಲೇ, ಆನಂದ್‌ ಸಿಂಗ್‌ ಅಸಮಾಧಾನ ಹೊರಹಾಕಿದ್ದು, ತಮ್ಮ ಖಾತೆ ಬದಲಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಯಾವ ಖಾತೆ ಬೇಕೆಂದು ಕೇಳಿದ್ದೆ. ನನ್ನ ಮನವಿ ಪರಿಗಣಿಸುವುದಾಗಿ ಹೇಳಿದ್ದರು. ಆದರೆ, ಈಗ ಬೇರೆ ಖಾತೆ ಕೊಡಲಾಗಿದೆ. ಇದರಿಂದ ನನಗೆ ಅಸಮಾಧಾನವಾಗಿರುವುದು ನಿಜ’ ಎಂದು ಆನಂದ್‌ ಸಿಂಗ್‌ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಚುಟುಕು ಸಂದರ್ಶನದಲ್ಲಿ ಹೇಳಿದ್ದಾರೆ.

‘ನಾನು ಕೇಳಿದ್ದ ಖಾತೆ ಸಿಗಬಹುದು ಎಂಬ ಉತ್ಸಾಹದಲ್ಲಿದೆ. ಆದರೆ, ಹಾಗಾಗಿಲ್ಲ. ಇನ್ನೊಮ್ಮೆ ಮುಖ್ಯಮಂತ್ರಿ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಮನವಿಗೆ ಸ್ಪಂದಿಸಿ, ಖಾತೆ ಬದಲಿಸದಿದ್ದರೆ ಬರೀ ಶಾಸಕನಾಗಿ ಉಳಿಯುವ ಬಗ್ಗೆ ಚಿಂತಿಸಲಾಗುವುದು’ ಎಂದಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನೇ ಕಾರಣ. 2019ರಲ್ಲಿ ಮೊದಲು ರಾಜೀನಾಮೆ ನೀಡಿದ್ದೂ ನಾನೇ. ಎಂಟು ದಿನಗಳ ಬಳಿಕ ಒಬ್ಬೊಬ್ಬರಾಗಿ ರಾಜೀನಾಮೆ ನೀಡಿದರು. ಪರಿಣಾಮವಾಗಿ ಬಿಜೆಪಿ ಸರ್ಕಾರ ಬಂತು. ಇದನ್ನು ವರಿಷ್ಠರು ಗಮನದಲ್ಲಿ ಇಟ್ಟುಕೊಂಡು ಖಾತೆ ಹಂಚಿಕೆ ಮಾಡಬೇಕಾಗಿತ್ತು’ ಎಂದೂ ಅವರು ತಿಳಿಸಿದ್ದಾರೆ.

‘ನನಗೆ ಬೇಡವಾದ ಖಾತೆ ಕೊಟ್ಟಿರುವ ಬಗ್ಗೆ ಅತೃಪ್ತಿಯಿದೆ. ಆದರೆ, ಎಲ್ಲವನ್ನೂ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಏನೇ ಕುಂದುಕೊರತೆ ಇದ್ದರೂ ಪಕ್ಷದೊಳಗೆ ಸರಿಪಡಿಸಿಕೊಳ್ಳುತ್ತೇವೆ’ ಎಂದು ಆರಂಭದಲ್ಲಿ ಪ್ರತಿಕ್ರಿಯಿಸಿದ ಆನಂದ್‌ ಸಿಂಗ್‌ ಬಳಿಕ ಸೂಚ್ಯವಾಗಿ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.

‘ಇಂಧನ ಮತ್ತು ಲೋಕೋಪಯೋಗಿ ಖಾತೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ’ ಎಂದು ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ್‌ ಸಿಂಗ್‌ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.