ಬಳ್ಳಾರಿ: ರಾಜ್ಯದ ಒಟ್ಟು 9.72 ಲಕ್ಷ ಹೆಕ್ಟೇರ್‌ನಷ್ಟು ವಿಶಾಲವಾದ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಲಕ್ಷಾಂತರ ರೈತರು ಈ ಬೆಳೆಯ ಮೇಲೆ ಅವಲಂಬಿತರಾಗಿದ್ದು, ಭತ್ತಕ್ಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂಬ ತಜ್ಞರು ಮತ್ತು ರೈತ ಮುಖಂಡರ ಬೇಡಿಕೆಗೆ ರಾಜ್ಯ ಸರ್ಕಾರ ತಣ್ಣೀರೆರಚಿದೆ.
ಭತ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಪ್ರಸ್ತಾವ ಇಲ್ಲ ಎಂದು ಸರ್ಕಾರ ಸದನದಲ್ಲಿ ಹೇಳಿದ್ದು, ಈ ಭಾಗದ ರೈತರ ನಿರೀಕ್ಷೆ ಹುಸಿಯಾಗಿದೆ.
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 46.90 ಲಕ್ಷ ಟನ್ ಭತ್ತವನ್ನು ಉತ್ಪಾದಿಸಲಾಗಿತ್ತು. ರಾಯಚೂರು ಜಿಲ್ಲೆಯಲ್ಲಿ 11.40 ಲಕ್ಷ ಟನ್ ಭತ್ತ ಉತ್ಪಾದನೆಯಾಗಿದ್ದು, ಪ್ರಥಮ ಸ್ಥಾನ ಪಡೆದಿತ್ತು. ನಂತರದ ಸ್ಥಾನಗಳಲ್ಲಿ ಬಳ್ಳಾರಿ (5.18 ಲಕ್ಷ ಟನ್), ಯಾದಗಿರಿ (4.72 ಲಕ್ಷ ಟನ್), ಕೊಪ್ಪಳ (4.22 ಲಕ್ಷ ಟನ್) ಜಿಲ್ಲೆಗಳಿದ್ದು, ಭತ್ತದ ಬಟ್ಟಲು ಎನಿಸಿಕೊಂಡಿವೆ.
ಇದರ ಜತೆಗೆ, ದಾವಣಗೆರೆ, ಮೈಸೂರು, ಮಂಡ್ಯ ಜಿಲ್ಲೆಗಳೂ ಭತ್ತ ಉತ್ಪಾದನೆಯ ಜಿಲ್ಲೆಗಳೆನಿಸಿವೆ. 2024-25ನೇ ಸಾಲಿನಲ್ಲಿ ಬೇಸಿಗೆ ಹಂಗಾಮಿನ ಉತ್ಪಾದನೆ ಹೊರತುಪಡಿಸಿ, ಅಂದಾಜು 42.14 ಲಕ್ಷ ಟನ್ ಭತ್ತದ ಉತ್ಪಾದನೆ ನಿರೀಕ್ಷಿಸಲಾಗಿದೆ.
ಹೀಗಾಗಿ ಭತ್ತಕ್ಕೆ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂಬ ಕೂಗು ಇದೆ. ಈ ನಿರೀಕ್ಷೆಗಳನ್ನು ಸರ್ಕಾರ ಆರಂಭಿಕ ಹಂತದಲ್ಲೇ ಚಿವುಟಿದ್ದು, ಮಂಡಳಿ ರಚಿಸುವುದಿಲ್ಲ ಎನ್ನುತ್ತಿದೆ.
ಏನು ಹೇಳಿದೆ ಸರ್ಕಾರ?: ಭತ್ತ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಇತ್ತೀಚೆಗೆ ಪರಿಷತ್‌ನಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ, ‘ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಹಲವು ಸಂಶೋಧನಾ ಕೇಂದ್ರಗಳು ಭತ್ತ ತಳಿ ಸಂಶೋಧನೆ ಮತ್ತು ಉತ್ಪಾದನಾ ತಾಂತ್ರಿಕತೆಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಉತ್ತಮ ಗುಣಮಟ್ಟದ ಭತ್ತದ ಬೀಜವನ್ನು ಉತ್ಪಾದಿಸಿ ರೈತರಿಗೆ ವಿತರಿಸುತ್ತಿವೆ. ಅಲ್ಲದೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತವು ಕೃಷಿ ಉತ್ಪನ್ನಗಳ ರಫ್ತು, ಉತ್ತೇಜಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕಾರಣಗಳಿಂದಾಗಿ ಪ್ರತ್ಯೇಕವಾದ ‘ಭತ್ತ ಅಭಿವೃದ್ಧಿ ಮಂಡಳಿ’ ಸ್ಥಾಪಿಸುವ ಪ್ರಸ್ತಾಪ ಇರುವುದಿಲ್ಲ’ ಎಂದು ಹೇಳಿದ್ದಾರೆ.
ಕುಸಿಯುತ್ತಿದೆ ಫಸಲು: ಕೃಷಿ ಇಲಾಖೆ ಮಾಹಿತಿ ಪ್ರಕಾರ 2013–2023ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಭತ್ತದ ಇಳುವರಿ ಒಟ್ಟಾರೆ ಶೇ 1.80ರಷ್ಟು ಕುಸಿದಿದೆ. ಹಾವೇರಿಯಲ್ಲಿ ಶೇ 57.22, ಬೀದರ್ ಶೇ 53.14, ಚಿತ್ರದುರ್ಗ– ಶೇ 57.74, ಮಂಡ್ಯ ಶೇ 33.52, ಮೈಸೂರು – ಶೇ 21.10, ಶಿವಮೊಗ್ಗ ಶೇ 29.28, ಹಾಸನ - ಶೇ 37.53ರಷ್ಟು ಇಳುವರಿ ಕುಸಿದಿದೆ.
ಭತ್ತದ ಬಟ್ಟಲು ಎಂದು ಕರೆಯಲಾಗುವ ರಾಯಚೂರಿನಲ್ಲಿ ಶೇ 2.40, ಕೊಪ್ಪಳದಲ್ಲಿ ಶೇ 7.32 ರಷ್ಟು ಉತ್ಪಾದನೆ ಕಡಿಮೆಯಾಗಿದೆ.
ಆದರೆ, ಕಲಬುರಗಿಯಲ್ಲಿ ಶೇ 36,80, ಕೋಲಾರ 35.37, ಧಾರವಾಡ 21.49 ಬಳ್ಳಾರಿಯಲ್ಲಿ ಶೇ. 2.31ರಷ್ಟು ಇಳುವರಿ ಹೆಚ್ಚಾಗಿದೆ.
ಆದರೆ, ಭತ್ತ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲೇ ಇಳುವರಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಭೂಮಿಯ ಫಲವತ್ತತೆ ಕ್ಷೀಣಿಸುತ್ತಿರುವುದು, ನೀರಿನ ಲಭ್ಯತೆ, ಭೂಮಿಯಲ್ಲಿ ಲವಣಾಂಶ, ಆಮ್ಲಿಯತೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಭತ್ತದ ಇಳುವರಿ ನಿಧಾನವಾಗಿ ಕುಸಿಯುತ್ತಿರುವುದನ್ನು ಗಮನಿಸಿ ಯಾದರೂ ಭತ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂಬುದು ರೈತರ ವಾದ.
ಭತ್ತ ಅಭಿವೃದ್ಧಿ ಮಂಡಳಿ ಕುರಿತು ಹಲವು ವೇದಿಕೆಗಳಲ್ಲಿ ಚರ್ಚೆಯಾಗಿದೆ. ಹೋರಾಟದ ರೂಪ ಪಡೆದುಕೊಂಡಿಲ್ಲ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿ ಮಂಡಳಿ ಸ್ಥಾಪಿಸಿದರೆ ಒಳಿತು.–ಕರೂರು ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.