ADVERTISEMENT

ನಾನು ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮುನಿಸಿಕೊಂಡಿಲ್ಲ: ಶ್ರೀರಾಮುಲು ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2021, 10:24 IST
Last Updated 29 ಜುಲೈ 2021, 10:24 IST
ಶ್ರೀರಾಮುಲು
ಶ್ರೀರಾಮುಲು   

ಬಳ್ಳಾರಿ: ‘ನನಗೆ ಉಪ ಮುಖ್ಯಮಂತ್ರಿ ಸ್ಥಾನ ಘೋಷಿಸಿಲ್ಲವೆಂದು ಮುನಿಸಿಕೊಂಡು ಬಳ್ಳಾರಿಗೆ ಬಂದಿಲ್ಲ. ಮನೆಯಲ್ಲಿ ವಿಶೇಷ ಪೂಜೆ ಇದ್ದುದ್ದರಿಂದ ಕುಟುಂಬದ ಜತೆ ಪಾಲ್ಗೊಳ್ಳಬೇಕಿತ್ತು ಅದಕ್ಕಾಗಿ ಬಂದಿದ್ದೇನೆ’ ಎಂದು ಶಾಸಕ ಶ್ರೀರಾಮುಲು ಸ್ವಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಪಕ್ಷದ ನಿಷ್ಠಾವಂತ‌ ಕಾರ್ಯಕರ್ತ. ಜನ ಬೆಂಬಲದಿಂದ ಮೇಲೆ ಬಂದಿದ್ದೇನೆ. ನನಗೆ ಪಕ್ಷ ಮುಖ್ಯವೇ ವಿನಾ ಅಧಿಕಾರ, ಅಂತಸ್ತಲ್ಲ. ಪಕ್ಷ ಇದುವರೆಗೆ ನನ್ನನ್ನು ಗೌರವದಿಂದ ಕಂಡಿದೆ. ಎಲ್ಲ ಸ್ಥಾನಮಾನ ನೀಡಿದೆ. ಈಗಲೂ ನನಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್‌ ಶಾ ಸರಿಯಾದ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ನಾನು ಏಳು ಸಲ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆರು ಸಲ ಗೆದ್ದಿದ್ದೇನೆ. ಮೂರು ಸಲ ಮಂತ್ರಿಯಾಗಿದ್ದೆ. ವಾಲ್ಮೀಕಿ ಜನಾಂಗದ ಕೋಟಾದಲ್ಲಿ ಯಾರನ್ನು ಡಿಸಿಎಂ ಮಾಡಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ನಾನು, ರಮೇಶ್‌ ಜಾರಕಿಹೊಳಿ ಪ್ರತಿಸ್ಪರ್ಧಿಗಳಲ್ಲ. ಈ ವಿಷಯದಲ್ಲಿ ಪಕ್ಷದ ತೀರ್ಮಾನವನ್ನು ಗೌರವಿಸುತ್ತೇನೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ಒಳ್ಳೆಯ ಸ್ನೇಹಿತರು. ಬಹಳ ವರ್ಷದಿಂದ ಅವರನ್ನು ಬಲ್ಲೆ. ಸಂಕಷ್ಟದ ಸಂದರ್ಭದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮೊನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಸ್ಥಾನಕ್ಕೆ ನಾನೇ ಅವರ ಹೆಸರನ್ನು ಅನುಮೋದಿಸಿದೆ. ಅವರಿಗೆ ಸಂಪೂರ್ಣ ಸಹಕಾರ ಕೊಡುತ್ತೇನೆ’ ಎಂದು ತಿಳಿಸಿದರು.

‘ಆಪ್ತ ಸಹಾಯಕ ರಾಜಪ್ಪ ಹಣ ವಸೂಲಿ ಮಾಡಿದ ಆರೋಪಕ್ಕೆ ಒಳಗಾಗಿರುವುದರಿಂದ ಉಪ ಮುಖ್ಯಮಂತ್ರಿ ಸ್ಥಾನ ತಪ್ಪಲಿದೆ ಎಂಬುದು ಸುಳ್ಳು ವದಂತಿ’ ಎಂದರು.

‘ಬಿಎಸ್‌ವೈ ನೆರಳಲ್ಲ’
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ನೆರಳಾಗಿ ಕೆಲಸ ಮಾಡುವುದಿಲ್ಲ. ಸ್ವಂತ ಸಾಮರ್ಥ್ಯದಿಂದ ಆಡಳಿತ ನಡೆಸುತ್ತಾರೆ’ ಎಂದು ಶ್ರೀರಾಮುಲು ಹೇಳಿದರು.

‘ಹಿಂದೆ ವಿಜಯೇಂದ್ರ ಅವರ ವಿಷಯದಲ್ಲೂ ಹೀಗೇ ಹೇಳಲಾಗುತಿತ್ತು. ಇವೆಲ್ಲವೂ ಸುಖಾಸುಮ್ಮನೆ ಹೇಳೊ ಮಾತು. ಎಲ್ಲವನ್ನೂ ನಿಭಾಯಿಸುವ ಶಕ್ತಿ ಬೊಮ್ಮಾಯಿ ಅವರಿಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.