ADVERTISEMENT

‘ನಾನೂ ಸಚಿವಾಕಾಂಕ್ಷಿ’; ಸಚಿವ ಸ್ಥಾನಕ್ಕೆ ಸೋಮಶೇಖರರೆಡ್ಡಿ ಲಾಬಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 12:02 IST
Last Updated 29 ಜುಲೈ 2021, 12:02 IST
ಸೋಮಶೇಖರ್‌ ರೆಡ್ಡಿ
ಸೋಮಶೇಖರ್‌ ರೆಡ್ಡಿ   

ಬಳ್ಳಾರಿ: ‘ನಾನೂ ಸಚಿವ ಸ್ಥಾನದ ಆಕಾಂಕ್ಷಿ’ ಎಂದು ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 2008ರಿಂದ ಬಿಜೆಪಿ ಅಧಿಕಾರಕ್ಕೆ ಬರಲು ನಮ್ಮ ಪಾತ್ರವೂ ಇದೆ. ಹಳಬರು ಜಾಗ ಖಾಲಿ ಮಾಡಿ, ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಡಿಸಿಎಂ ಸ್ಥಾನ ರಾಮುಲು ಅವರಿಗೆ ಸಿಗಬಹುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಬಳ್ಳಾರಿ ನಗರದ ಬಿಜೆಪಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದು, ಜಿಲ್ಲೆಗೆ ಮಂತ್ರಿ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ.

ADVERTISEMENT

‘ಹಿಂದೆ ಸಚಿವ ಸಂಪುಟದಲ್ಲಿ ಬಳ್ಳಾರಿ ಜಿಲ್ಲೆಯ ಮೂವರು ಮಂತ್ರಿಗಳಿದ್ದರು. ಈಗ ಒಬ್ಬರಿಗೂ ಸ್ಥಾನ ನೀಡಿಲ್ಲ. ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದರಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತಿದೆ’ ಎಂದು ಸೋಮಶೇಖರರೆಡ್ಡಿ ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

‘ಪಾಲಿಕೆ ಚುನಾವಣೆಯಲ್ಲೂ ನಾವು ಸೋತಿದ್ದೇವೆ, ಬಳ್ಳಾರಿ ಇಬ್ಭಾಗ ಮಾಡಿದ ಸಿಟ್ಟು ಜನರಲ್ಲಿದೆ. ರಾಮುಲುಗೆ ಡಿಸಿಎಂ ಹುದ್ದೆ ನೀಡಿದರೆ ಅದು ಬಳ್ಳಾರಿ ಜಿಲ್ಲೆಯ ಕೋಟಾದಲ್ಲಿ ಬರುವುದಿಲ್ಲ. ಈಗ ಜಿಲ್ಲೆಯಲ್ಲಿ ಇರುವುದು ಕೇವಲ ಇಬ್ಬರು ಬಿಜೆಪಿ ಶಾಸಕರು. ನನಗೆ ಸಚಿವ ಸ್ಥಾನ ನೀಡಿ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ನೆಲೆಗೊಳ್ಳುವಂತೆ ಮಾಡಿ’ ಎಂದು ದೆಹಲಿ ನಾಯಕರಿಗೆ ರೆಡ್ಡಿ ಮನವಿ ಮಾಡಿದ್ದಾರೆ.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವಿಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್‌ ಹಾಗೂ ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿದ ಸೋಮಶೇಖರರೆಡ್ಡಿ ಜಿಲ್ಲೆಯ ರಾಜಕಾರಣವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.