ADVERTISEMENT

ಧರ್ಮದ ಹೆಸರಲ್ಲಿ ಮುಗ್ಧರ ಹತ್ಯೆ ಸಲ್ಲದು

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ರೈತ ಮುಖಂಡ ವೀರಸಂಗಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 12:59 IST
Last Updated 2 ಆಗಸ್ಟ್ 2019, 12:59 IST
ಹೊಸಪೇಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ರೈತ ಮುಖಂಡ ಜೆ.ಎಂ. ವೀರಸಂಗಯ್ಯ ಮಾತನಾಡಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ರೈತ ಮುಖಂಡ ಜೆ.ಎಂ. ವೀರಸಂಗಯ್ಯ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಕಾಯಕದ ಮುಂದೆ ಯಾವ ಧರ್ಮವೂ ಶ್ರೇಷ್ಠವಿಲ್ಲ. ಆದರೆ, ಇಂದು ಧರ್ಮದ ಶ್ರೇಷ್ಠತೆಯ ಹೆಸರಿನಲ್ಲಿ ಮುಗ್ಧರ ಹತ್ಯೆ ಮಾಡಲಾಗುತ್ತಿದೆ’ ಎಂದು ರೈತ ಮುಖಂಡ ಜೆ.ಎಂ. ವೀರಸಂಗಯ್ಯ ಕಳವಳ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಶಂಕರ್‌ ಆನಂದ್‌ ಸಿಂಗ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ’ಮತ್ತೆ ಕಲ್ಯಾಣ, ಕಲ್ಯಾಣದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘900 ವರ್ಷಗಳ ಹಿಂದೆ ಕನ್ನಡ ನಾಡಿನಲ್ಲಿ ಬಸವಾದಿ ಶರಣರು ಇಡೀ ಜಗತ್ತಿನಲ್ಲೇ ಶ್ರೇಷ್ಠವಾದ ಕಾಯಕ ಮತ್ತು ದಾಸೋಹ ಎಂಬ ಶ್ರೇಷ್ಠ ತತ್ವಗಳನ್ನು ಕೊಟ್ಟರು. ಆದರೆ, ಅದು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಬದಲಾಗಿ ಈ ನಾಡಿನಲ್ಲಿ ಅನೇಕ ಜಾತಿ ಸಂಘಟನೆಗಳು ಹುಟ್ಟಿಕೊಂಡಿವೆ. ಹಿಂದೂ ಮುಸ್ಲಿಮರ ನಡುವೆ ನಿರಂತರವಾಗಿ ಘರ್ಷಣೆಗಳು ನಡೆಯುತ್ತಿವೆ. ಮೇಲ್ವರ್ಗದ ಜನ, ಪಟ್ಟಭದ್ರ ಹಿತಾಸಕ್ತಿಗಳ ಮನೋಭಾವ ಬದಲಾಗದ ಕಾರಣ ಸಮಾಜದಿಂದ ಮೇಲು–ಕೀಳು ಎಂಬುದು ಹೋಗಿಲ್ಲ’ ಎಂದರು.

ADVERTISEMENT

‘ಮನುಷ್ಯ ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತಾನೆ. ಆದರೆ, ಈ ಸಮಾಜ, ಈ ವ್ಯವಸ್ಥೆ ನಮ್ಮನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸುತ್ತಿದೆ. ಹೆಚ್ಚು ಓದಿದವರೇ ಜಾತಿ ಸಂಘಟನೆಗಳನ್ನು ಕಟ್ಟುತ್ತಿದ್ದಾರೆ. ಹಿಂದೂ ಮುಸ್ಲಿಮರ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ನಾವು ಪಡೆಯುವ ಶಿಕ್ಷಣ, ಜ್ಞಾನದಿಂದ ವಿಶ್ವಮಾನವರಾಗಬೇಕು. ಆದರೆ, ಆಗುತ್ತಿಲ್ಲ’ ಎಂದು ಹೇಳಿದರು.

‘ಇಂದು ಅತ್ಯಂತ ವಿಷಮ ಸ್ಥಿತಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಜೈಶ್ರೀರಾಂ ಹೇಳಿಲ್ಲ ಎಂಬ ಒಂದೇ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಸುಟ್ಟು ಸಾಯಿಸಲಾಗಿದೆ. ಮತ್ತೊಂದೆಡೆ ಅಲ್ಲಾಹುವಿನ ಹೆಸರು ಹೇಳುತ್ತಿಲ್ಲ ಎಂದು ಉಗ್ರರು ನಿತ್ಯ ಅನೇಕ ಜನರನ್ನು ಸಾಯಿಸುತ್ತಿದ್ದಾರೆ’ ಎಂದರು.

‘ದೇಶದಲ್ಲಿ ಪ್ರತಿ 24 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಅನ್ನದಾತ ಬಹಳ ಸಂಕಷ್ಟದ ಸ್ಥಿತಿಯಲ್ಲಿದ್ದಾನೆ. ಅನ್ನ ಬೆಳೆಯುವ ರೈತ ಯಾವ ಜಾತಿ, ಧರ್ಮ ನೋಡದೆ ತಾನು ಬೆಳೆದುದ್ದನ್ನು ಎಲ್ಲರಿಗೂ ಕೊಡುತ್ತಾನೆ. ಅವನು ಕಾಯಕವೇ ಶ್ರೇಷ್ಠ ಎಂದು ಭಾವಿಸಿದ್ದಾನೆ. ಅದು ಶರಣ ಸಿದ್ಧಾಂತವೂ ಹೌದು. ಕನ್ನಡಿಗರಾದವರು ಹೆಮ್ಮೆ ಪಡಬೇಕು. ದೀನ–ದಲಿತರನ್ನು ಜತೆಗೆ ಕರೆದುಕೊಂಡು ಹೋಗಬೇಕು. ಆದರೆ, ಬಸವಾದಿ ಶರಣರ ವಿಚಾರಗಳನ್ನು ನಾವು ಮರೆತಿದ್ದೇವೆ. ಆ ಮರೆವಿನಿಂದ ಹೊರತರಲು ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಬಸವ ಬಳಗದ ಟಿ.ಎಚ್‌. ಬಸವರಾಜ ಮಾತನಾಡಿ, ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಇಡೀ ಜಗತ್ತಿಗೆ ಕಾಯಕ, ದಾಸೋಹ ಎಂಬ ಶ್ರೇಷ್ಠ ತತ್ವಗಳನ್ನು ಕೊಟ್ಟರು. ಆ ಸಿದ್ಧಾಂತಗಳನ್ನು ಅನ್ಯ ದೇಶಗಳು ಕೊಂಡಾಡುತ್ತಿವೆ. ಆದರೆ, ಕನ್ನಡಿಗರಾದವರು ನಾವು ಅವುಗಳಿಂದ ದೂರವಾಗುತ್ತಿದ್ದೇವೆ’ ಎಂದರು.

ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಮಾತನಾಡಿ, ‘ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಗೆ ಬಸವಾದಿ ಶರಣರ ವಿಚಾರಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ. ಇಂದಿನ ಸಮಕಾಲೀನ ವಿಷಮ ಸಂದರ್ಭದಲ್ಲಿ ಅದರ ಅಗತ್ಯವಿತ್ತು’ ಎಂದು ಹೇಳಿದರು.

ರೈತ ಮುಖಂಡರಾದ ಗೋಣಿ ಬಸಪ್ಪ, ಘಂಟೆ ಸೋಮಶೇಖರ್‌, ಪ್ರಾಧ್ಯಾಪಕ ಪಲ್ಲವ ವೆಂಕಟೇಶ, ಮುಖಂಡರಾದ ಬಸವರಾಜ ಕಮ್ಮಾರ, ಸೋದಾ ವಿರೂಪಾಕ್ಷಗೌಡ, ಸೌಭಾಗ್ಯಲಕ್ಷ್ಮಿ, ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.