ಕೊಟ್ಟೂರು: ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿರುವ ಕೆಲವು ಕೊಳವೆ ಬಾವಿಗಳಲ್ಲಿ ಪಂಪು, ಮೋಟಾರ್ ಚಾಲನೇ ಇಲ್ಲದೇ ಕೇಸಿಂಗ್ ಪೈಪ್ ಮೂಲಕ ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಜಲಧಾರೆ ಉಕ್ಕಿ ಹರಿಯುತ್ತಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸದೊಂದಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದಿರುವುದರಿಂದ ಅಂತರ್ಜಲ ಕ್ಷೀಣಿಸಿ ಕೆಲವು ಕೊಳವೆ ಬಾವಿಗಳಲ್ಲಿ ನೀರು ಕಾಣದೇ ಮುಚ್ಚುವ ಹಂತಕ್ಕೆ ತಲುಪಿದ್ದವು. ಪ್ರಸಕ್ತ ವರ್ಷ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಕೃಷಿ ಹೊಂಡಗಳು, ಹಳ್ಳ ಹಾಗೂ ಗೋಕಟ್ಟೆಗಳು ಭರ್ತಿಯಾಗಿ ಕುಸಿದಿದ್ದ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದೆ.
ಗ್ರಾಮದ ಜಂತಕಲ್ ಕರಿಬಸಪ್ಪ, ಎಚ್.ಕೆ.ಕಲ್ಲೇಶಣ್ಣ, ಸತ್ಯಮ್ಮ, ಎಚ್.ಎಂ.ಸರಸ್ವತಿ, ತಳವಾರ ದೇವೇಂದ್ರಪ್ಪ ಮುಂತಾದ ರೈತರ ಕೊಳವೆ ಬಾವಿಗಳಲ್ಲದೇ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಯಲ್ಲೂ ಸಹ ನೀರು ಹರಿಯುತ್ತಿರುವುದರಿಂದ ಬರುವ ಬೇಸಿಗೆಯಲ್ಲಿ ಜನ ಜಾನುವಾರುಗಳ ಕುಡಿಯುವ ನೀರಿಗೆ ಚಿಂತೆ ಮಾಡುವಂತಿಲ್ಲ ಎಂಬುದೇ ಗ್ರಾಮದ ಜನತೆಗೆ ನೆಮ್ಮದಿ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.