
ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಲಾಧಾರಿಗಳು.
ಕೊಟ್ಟೂರು: ಪಟ್ಟಣದ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ಲಕ್ಷದೀಪೋತ್ಸವ ಹಾಗೂ ಬೆಳ್ಳಿ ರಥೋತ್ಸವ 8 ರಂದು ಸೋಮವಾರ ಜರುಗಲಿದೆ. ಕಳೆದ ದೀಪಾವಳಿ ಪಾಡ್ಯದಂದು ಪ್ರಾರಂಭವಾಗಿರುವ ಪಲ್ಲಕ್ಕಿ ಉತ್ಸವ ಕಾರ್ತೀಕೋತ್ಸವದವರೆಗೆ ಪ್ರತಿ ಸೋಮವಾರ ಹಾಗೂ ಗುರುವಾರ ಶ್ರದ್ಧಾ ಭಕ್ತಿಯೊಂದಿಗೆ ಉತ್ಸವ ಜರುಗಿತು.
16ನೇ ಶತಮಾನದ ಪೂರ್ವಾರ್ಧದಲ್ಲಿ ಬಾಳಿ ಬದುಕಿದ ಪಂಚ ಗಣಾಧೀಶ್ವರರಲ್ಲಿ ಒಬ್ಬರಾದ ಸಮಾನತೆಯ ಹರಿಕಾರ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿ ಪವಾಡ ಪುರುಷ. ಸಾಮಾಜಿಕ ಸಮಾನತೆಯ ಆಶಯಗಳನ್ನು ಸಾಕಾರಗೊಳಿಸಲು ಯತ್ನಿಸಿದ ಬಸವಾದಿ ಶರಣರ ಪ್ರಮಥರ ಸಾಲಿನಲ್ಲಿ ಶ್ರೀಗುರು ಕೊಟ್ಟೂರೇಶ್ವರರು ಅಗ್ರಗಣ್ಯರು.
ಪಟ್ಟಣ ಹಾಗೂ ಸುತ್ತ ಮುತ್ತಲಿನ ಊರುಗಳಲ್ಲಿ ಕಾರ್ತೀಕ ಮಾಸದಲ್ಲಿ ಎಲ್ಲಿ ನೋಡಿದರಲ್ಲಿ ಶ್ವೇತ ವಸ್ತ್ರ ಧರಿಸಿದ ಗುರು ವೃಂದದವರು ಕಾಣುತ್ತಾರೆ. ಜೀವನದಲ್ಲಿ ಸದ್ಭಾವನೆ ಮತ್ತು ಸದ್ವರ್ತನೆಯನ್ನು ಹೊಂದುವುದೇ ಕೊಟ್ಟೂರೇಶ್ವರ ಮಾಲೆ ಧರಿಸುವ ಪ್ರಮುಖ ಉದ್ದೇಶ. ಸ್ವಾಮಿಗೆ ಪ್ರಿಯವಾದ ರುದ್ರಾಕ್ಷಿ, ವಿಭೂತಿ, ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ಲಿಂಗ ಪೂಜೆಯಲ್ಲಿ ಮಾಲಾಧಾರಿಗಳು ತಲ್ಲೀನರಾಗುತ್ತಾರೆ.
ಸ್ವಾಮಿಯ ಮಾಲೆ ಧರಿಸುವವರು 5,9,11,21,45 ದಿನಗಳನ್ನು ಆಯ್ಕೆ ಮಾಡಿಕೊಂಡು ವೃತಾಚರಣೆ ಅನುಸರಿಸುವರು. ಕಾರ್ತೀಕೋತ್ಸವದ ನಂತರ ಮಾಲೆಯನ್ನು ಶ್ರೀಕ್ಷೇತ್ರದಲ್ಲಿ ವಿಸರ್ಜಿಸಬೇಕಿರುವುದು ಇದರ ನಿಯಮ. ಜಾತಿ ಬೇಧವಿಲ್ಲದೇ ಯಾರಾದರೂ ಮಾಲೆ ಧರಿಸಬಹುದು. ಆರಂಭದಲ್ಲಿ ಕೊಟ್ಟೂರಿಗಷ್ಟೇ ಸೀಮಿತವಾಗಿದ್ದ ಕೊಟ್ಟೂರೇಶ್ವರ ಮಾಲಾಧಾರಣೆ ಪರಂಪರೆ ಇದೀಗ ನಾಡಿನಾದ್ಯಂತ ವ್ಯಾಪಿಸಿರುವುದು ಭಕ್ತರಲ್ಲಿನ ಧಾರ್ಮಿಕ ನಂಬಿಕೆ, ಆಚರಣೆ ಆಳವಾಗಿ ಬೇರೂರುತ್ತಿರುವುದರ ಸಂಕೇತವಾಗಿದೆ.
’ಲಿಂಗ ಪೂಜೆ, ಧ್ಯಾನ ಮಾಡುವ ಪರಿಪಾಲನೆಯಿಂದ ಸದ್ಗುಣ, ಉತ್ತಮ ನಡೆ, ನುಡಿಗಳಿಂದ ಸೌಜನ್ಯದ ಮನೋಭಾವ ಬೆಳೆಯುತ್ತಿದೆ’ ಎಂದು ಮಾಲಾಧಾರಿ ಕೊಟ್ರೇಶ್ ಹೇಳಿದರು.
ಕಾರ್ತೀಕೊತ್ಸವದ ಪ್ರಯುಕ್ತ ಹಿರೇಮಠದಿಂದ ತೊಟ್ಟಿಲುಮಠ ಹಾಗೂ ಗಚ್ಚಿನಮಠದವರೆಗೆ ಉತ್ಸವ ಸಾಗುವ ದಾರಿಯುದ್ದಕ್ಕೂ ಪ್ರಣತಿಗಳ ಜೋಡಣೆ, ವಿದ್ಯುತ್ ದೀಪಗಳ ಅಲಂಕಾರ ಹಾಗೂ ತಳಿರುತೋರಣ, ವಿವಿಧ ಬಗೆಯ ಪುಷ್ಪಗಳೊಂದಿಗೆ ಬಾಳೆಕಂಬಗಳನ್ನು ಕಟ್ಟಿ ಅಲಂಕರಿಸುವ ಕಾರ್ಯ ಭರದಿಂದ ಸಾಗಿದೆ. ಸ್ವಾಮಿಯ ಬೆಳ್ಳಿ ರಥೋತ್ಸವವನ್ನು ಕಣ್ಣು ತುಂಬಿಕೊಳ್ಳಲು ತಂಡೋಪತಂಡವಾಗಿ ಭಕ್ತರು ಆಗಮಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.